ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸಿಲಿಂಡರ್ ಸ್ಪೋಟ ಪ್ರಕರಣ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ನಲ್ಲಿ, ಅತ್ಯುತ್ತಮ ವೈದ್ಯರ ತಂಡ ಹಗಲು ರಾತ್ರಿ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಒಂಬತ್ತು ಮಾಲಾಧಾರಿಗಳ ಪೈಕಿ ಒಬ್ಬರಿಂದ ಒಬ್ಬರು ಪ್ರಾಣ ಬಿಡುತ್ತಿದ್ದಾರೆ. ಇಂದು ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಮಾಲಾಧಾರಿಗಳ ಮೇಲೆ ಅಯ್ಯಪ್ಪ ಸ್ವಾಮಿ ಯಾಕಿಷ್ಟು ಸಿಟ್ಟು ಅಂತ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಕಳೆದ ಭಾನುವಾರ ತಡ ರಾತ್ರಿ ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ನಡೆದಿದ್ದ ಅಯ್ಯಪ್ಪ ಮಾಲಾಧಾರಿಗಳ ಸಿಲಿಂಡರ್ ಸ್ಪೋಟ, ಇಡೀ ಹುಬ್ಬಳ್ಳಿ - ಧಾರವಾಡ ಜನರನ್ನು ಬೆಚ್ಚಿ ಬೀಳಿಸಿತ್ತು. ಈಶ್ವರ ದೇವಸ್ಥಾನದಲ್ಲಿ ಮಲಗಿದ್ದ ಒಂಬತ್ತು ಮಾಲಾಧಾರಿಗಳು, ತೀವ್ರ ಬೆಂಕಿಗೆ ಬೆಂದಿದ್ದರು. ಇಂದು ಒಂದೇ ದಿನದಲ್ಲಿ ಮತ್ತೆ ಇಬ್ಬರು ಅಯ್ಯಪ್ಪನ ಪಾದ ಸೇರಿದ್ದಾರೆ. 24 ವರ್ಷದ ಶಂಕರ್ ಚವ್ಹಾಣ್, 29 ವರ್ಷ ಮಂಜುನಾಥ್ ವಾಗ್ಮೋಡೆ ಇಬ್ಬರು ಸಾವನ್ನಪ್ಪಿದ್ದು, ಮಾಲಾಧಾರಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯಪ್ಪ ಸ್ವಾಮಿ ನಮ್ಮ ಮಕ್ಕಳ ಜೀವ ಉಳಿಸಲಿಲ್ಲ. ಶ್ರದ್ಧೆಯಿಂದ ಪೂಜೆ ಮಾಡಿದ ಭಕ್ತರನ್ನೆ ಅಯ್ಯಪ್ಪ ಬದುಕುಳಿಸಲಿಲ್ಲ. ಇದೆಂಥ ಕ್ರೂರ ವ್ಯವಸ್ಥೆ ಎಂದು ಮಾಲಾಧಾರಿಗಳ ಕುಟುಂಬಸ್ಥರ ಅಳಲು.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹೀಗಾಗಿ ಕಿಮ್ಸ್ ನಿರ್ದೇಶಕ ಎಸ್.ಎಫ್ ಕಮ್ಮಾರ ಅವರ ನೇತೃತ್ವ ತಂಡ, ಬೆಂಗಳೂರಿನ ವಿಶೇಷ ವೈದ್ಯರ ಜೊತೆಗೂಡಿ ಮಾಲಾಧಾರಿಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಅಯ್ಯಪ್ಪಸ್ವಾಮಿಯ ಇಡೀ ಭಕ್ತರ ವೃಂದ, ಗಾಯಾಳುಗಳ ಕುಟುಂಬಸ್ಥರು ಎಲ್ಲರೂ ಬದುಕಲಿ ಅಂತ ನಿತ್ಯ ಪ್ರಾರ್ಥನೆ ಮಾಡುತ್ತಿದ್ದಾರೆ. ಆದ್ರೆ ಅದ್ಯಾಕೋ ಏನೋ ಅಯ್ಯಪ್ಪ ಭಕ್ತರ ಮತ್ತು ವೈದ್ಯರ ಶ್ರಮವನ್ನು ಕಣ್ಣು ತೆರೆದು ನೋಡುತ್ತಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಈಗಾಗಲೇ ನಾಲ್ಕು ಜನ ಮಾಲಾಧಾರಿಗಳು ಮೃತಪಟ್ಟಿದ್ದು, ಇಂದು ಮತ್ತೆ ಇಬ್ಬರ ಗಾಯಾಳು ಕೊನೆಯುಸಿರೆಳೆದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಇವರೆಲ್ಲ ಅತೀ ಬಡ ಕುಟುಂಬದವರು. ಸರ್ಕಾರ ತಾವು ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿಗೆ ಅನುಕೂಲ ಮಾಡಬೇಕೆಂದು ಓಣಿಯ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಇಂದು ತಡರಾತ್ರಿ ಶಂಕರ್, ಹಾಗೂ ಬೆಳಗ್ಗೆ 10 ಗಂಟೆ ಸುಮಾರಿಗೆ 22 ವರ್ಷದ ಮಂಜುನಾಥ ವಾಗ್ಮೋಡೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಶಂಕರ್ ಕಿಮ್ಸ್ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆದಾರದಲ್ಲಿ ಅನಿಲ್ ಘಟಕದ ಸಿಬ್ಬಂದಿಯಾಗಿದ್ದ, ಬಾಲ್ಯದಲ್ಲಿ ತಂದೆ - ತಾಯಿ ಕಳೆದುಕೊಂಡು ಅನಾಥವಾಗಿದ್ದ ಶಂಕರ್, ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸವಿದ್ದ. ಇನ್ನೂ 22 ವರ್ಷ ಮಂಜುನಾಥ ಎರಡನೇ ವರ್ಷ ಡಿಪ್ಲೊಮಾ ಕೋರ್ಸ್ ವಿದ್ಯಾರ್ಥಿಯಾಗಿದ್ದ. ಒಂದು ವಾರದಿಂದ ಚಿಕಿತ್ಸೆಗೆ ಈ ಇಬ್ಬರು ಉತ್ತಮವಾಗಿ ಸ್ಪಂದನೆ ನೀಡಿದ್ದರೂ, ಸುಟ್ಟ ಗಾಯಗಳ ಪ್ರಮಾಣ ಜಾಸ್ತಿ ಇದ್ದ ಕಾರಣ, ನೋವು ತಾಳಲಾರದೆ ಇಂದು ಕೊನೆಯುಸಿರೆಳೆದ್ದಾರೆ. ಇನ್ನೂ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾಲಾಧಾರಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಒಟ್ಟಿನಲ್ಲಿ ಒಂಬತ್ತು ಮಾಲಾಧಾರಿಗಳ ಪೈಕಿ ಆರು ಜನ ಸಾವನ್ನಪ್ಪಿದ್ದು, ಇನ್ನೂ ಮೂರು ಮಾಲಾಧಾರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಇವರನ್ನ ಮಣಿಕಂಠ ಕಾಪಾಡಲಿ ಎನ್ನುವುದು ಅಸಂಖ್ಯಾತ ಅಯ್ಯಪ್ಪ ಭಕ್ತರ ಪ್ರಾರ್ಥನೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/12/2024 03:15 pm