ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ - ಹಲವು ಪ್ರಮುಖ ನಿರ್ಣಯ ಕೈಗೊಳ್ಳುವ ಸಾಧ್ಯತೆ!

ಬೆಳಗಾವಿಯಲ್ಲಿ ನಾಳೆಯಿಂದ ಎರಡು ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಬೆಳಗಾವಿ ನಗರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಅಷ್ಟೇ ಅಲ್ಲದೇ ನಾಳೆ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಇನ್ನೂ ದೇಶದ ವಿವಿಧ ಮೂಲೆಗಳಿಂದ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಆಗಮಿಸಿದ್ದು, ನಾಳೆ ಮಹತ್ವದ ಕಾರ್ಯಕಾರಿಣಿ ಸಭೆ ನಡೆಯಲಿದೆ.

ಬೆಳಗಾವಿ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಎರಡು ದಿನ ವಿಜೃಂಭಣೆಯಿಂದ ನಡೆಯಲಿದೆ. ಇದಕ್ಕಾಗಿ ಬೆಳಗಾವಿ ನಗರ ಸಂಪೂರ್ಣವಾಗಿ ಕಾಂಗ್ರೆಸ್ ಮಯವಾಗಿ ಬದಲಾವಣೆ ಆಗಿದೆ. ಯೆಸ್ ಬೆಳಗಾವಿಯಲ್ಲಿ ಸಂಪೂರ್ಣ ದೀಪಲಂಕಾರ, ಕಾಂಗ್ರೆಸ್ ಬಾವುಟ, ಫ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿವೆ. 1924ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಮಹಾತ್ಮ ಗಾಂಧಿ, ನೆಹರೂ, ಗಂಗಾಧರರಾವ್ ದೇಶಪಾಂಡೆ, ಮೌಲಾನಾ ಆಜಾದ್ ಸೇರಿ ಅನೇಕರು ಪಾಲ್ಗೊಂಡಿದ್ದರು. ಈ ಅಧಿವೇಶನದಲ್ಲಿ ಪ್ರಥಮ ಸಲ ದೇಶಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗಬೇಕು ಎಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಎಲ್ಲಾ ಐತಿಹಾಸಿಕ ಘಟನೆಗೆ ಈಗ ನೂರು ವರ್ಷ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ. ದೇಶದಲ್ಲಿ ಇರೋ ಹಾಲಿ, ಮಾಜಿ ಸಿಎಂಗಳು, ವಿರೋಧ ಪಕ್ಷದ ನಾಯಕರು 100ಕ್ಕೂ ಹೆಚ್ಚು ಸಂಸದರು ಹಾಗೂ ಎಐಸಿಸಿಯ ಪ್ರಮುಖರು ಬೆಳಗಾವಿಗೆ ಈಗಾಗಲೇ ಆಗಮಿಸಿದ್ದಾರೆ. ನಾಳೆ ವೀರಸೌಧದಲ್ಲಿ ಮಹತ್ವದ ಕಾರ್ಯಕಾರಿಣಿ ಸಭೆ ನಡೆಯಲಿದೆ.

ವೀರಸೌಧದಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಹಲವು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ದೇಶದಲ್ಲಿ ಸಂವಿಧಾನ ಉಳಿಸಲು ಹೋರಾಟ ನಡೆಸಬೇಕು. ಜೊತೆಗೆ ಒಂದು ದೇಶ ಒಂದು ಚುನಾವಣೆಯನ್ನು ವಿರೋಧಿಸುವ ಬಗ್ಗೆ ನಿರ್ಣಯವಾಗುವ ಸಾಧ್ಯತೆ ಇದೆ. ಇನ್ನೂ ಇವಿಎಂ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ದೇಶದಲ್ಲಿ ಜೈ ಬಾಪು, ಜೈ ಅಂಬೇಡ್ಕರ್, ಜೈ ಸಂವಿಧಾನ ಎನ್ನುವ ಘೋಷ ವ್ಯಾಕ್ಯ ಮೊಳಗಿಸಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನೂ ನಾಳೆ ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ಮಹಾತ್ಮ ಗಾಂಧಿ ಪ್ರತಿಮೆ ಹಾಗೂ ಫೋಟೋ ಗ್ಯಾಲರಿ ಸೇರಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಖಾದಿ ಉತ್ಸವಕ್ಕೆ ಚಾಲನೆ ಬಳಿಕ, ರಾಮತೀರ್ಥ ನಗರದಲ್ಲಿ ಗಂಗಾಧರರಾವ್ ದೇಶಪಾಂಡೆ ಪುತ್ಥಳಿ, ಸ್ಮಾರಕ ಭವನ ಉದ್ಘಾಟನೆ ಮಾಡಲಿದ್ದಾರೆ. ಇದಾದ ಬಳಿಕ ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ.

ಪ್ರಹ್ಲಾದ್ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Manjunath H D
PublicNext

PublicNext

26/12/2024 08:37 am

Cinque Terre

25.89 K

Cinque Terre

0

ಸಂಬಂಧಿತ ಸುದ್ದಿ