ಧಾರವಾಡ: ಸ್ವರ್ಣಾ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ.ವಿಎಸ್‌ವಿ ಪ್ರಸಾದ್ ಅವರು ತಾವು ಕೊಡುಗೈ ದಾನಿ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಶಿಷ್ಯವೇತನ ದಿನಾಚರಣೆ ಹಾಗೂ ಪಾಲಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ.ವಿಎಸ್‌ವಿ ಪ್ರಸಾದ್ ಅವರು ತಮ್ಮ ತಾಯಿ ಹೆಸರಿನಲ್ಲಿ ಈ ಕಾಲೇಜಿಗೆ 5 ಲಕ್ಷ 49 ರೂಪಾಯಿಗಳನ್ನು ಠೇವಣಿ ಇಟ್ಟು, ಅದರ ಬಡ್ಡಿ ಮೊತ್ತವನ್ನು ಪ್ರತಿವರ್ಷ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನಾಗಿ ನೀಡುವಂತೆ ಘೋಷಿಸಿದರು.
ಈ ವೇಳೆ ಮಾತನಾಡಿದ ಡಾ.ವಿಎಸ್‌ವಿ ಪ್ರಸಾದ್, ವಿದ್ಯಾರ್ಥಿ ಜೀವನ ಉತ್ಕೃಷ್ಟವಾದ ಜೀವನ. ಪಿಯುಸಿ ಎಂದರೆ ಅದು ವಿದ್ಯಾರ್ಥಿ ಜೀವನವನ್ನು ಬದಲಿಸುವ ಮೆಟ್ಟಿಲು. ವಿದ್ಯಾರ್ಥಿಗಳ ಗುರಿಯನ್ನು ಮುಟ್ಟಿಸುವ ಮೆಟ್ಟಿಲು ಇದಾಗಿರುತ್ತದೆ ಎಂದರು.
ಬೇರೆ ಬೇರೆ ಕಾಲೇಜುಗಳು ಇಷ್ಟೇ ಅಂಕ ಪಡೆದವರಿಗೆ ಮಾತ್ರ ಪ್ರವೇಶ ಎಂದು ಬೋರ್ಡ್ ಹಾಕಿ ಲಕ್ಷಾಂತರ ಫೀ ವಸೂಲಿ ಮಾಡುತ್ತಿವೆ. ಆದರೆ, ಹಿರೇಮಲ್ಲೂರು ಕಾಲೇಜು ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ. ಇಲ್ಲಿನ ವಾತಾವರಣ ವಿದ್ಯಾರ್ಥಿಗಳ ಬದುಕನ್ನೇ ಬದಲಿಸುತ್ತಿದೆ. ಇತ್ತೀಚೆಗೆ ಕೊಡುವ ಚಿನ್ನದ ಪದಕಗಳಲ್ಲಿ 20 ಮಿಲಿ ಗ್ರಾಂ ಸಹಿತ ಚಿನ್ನ ಇರುವುದಿಲ್ಲ. ಆದರೆ, ಈ ಕಾಲೇಜು 20 ಗ್ರಾಂ ನಿಜವಾದ ಚಿನ್ನದ ಪದಕ ಕೊಡುವ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಮಾಡಿದ ದಾನಕ್ಕೆ ನಮ್ಮನ್ನು ದಾನಿಗಳು ಎನ್ನಬಾರದು. ನಮಗೆ ದೇವರು ಕೊಟ್ಟಿದ್ದರಲ್ಲಿ ಇನ್ನೊಬ್ಬರಿಗೆ ಕೊಡುತ್ತೇವೆ. ಅದನ್ನು ಸೇವೆ ಎನ್ನಬೇಕು. ವಿದ್ಯಾರ್ಥಿಗಳು ಗುರಿ ಸಾಧಿಸುವವರೆಗೂ ನಿದ್ರೆ ಮಾಡಬಾರದು. ನಿದ್ರೆ ಮಾಡಲು ಬಿಡದೇ ಇರುವಂತ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ವಿಎಸ್‌ವಿ ಪ್ರಸಾದ್ ಅವರು ವಿವಿಧ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರಗಳನ್ನು ವಿತರಿಸಿದರು. ಅಲ್ಲದೇ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನೂ ಸನ್ಮಾನಿಸಿದರು.
ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಎಂ.ವೆಂಕಟೇಶಕುಮಾರ, ಛಾಯಾಗ್ರಾಹಕ ಶಶಿ ಸಾಲಿ, ಚಿನ್ನದ ವ್ಯಾಪಾರಿಗಳಾದ ಅರುಣ ಮಹಾಜನಸೇಠ್, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ಶಶಿಧರ ತೋಡ್ಕರ್ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/12/2024 05:47 pm