ಹುಬ್ಬಳ್ಳಿ: ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಯೇಸುವಿನ ಜನ್ಮದಿನ 'ಕ್ರಿಸ್‌ಮಸ್' ಅನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತದೆ. ಗಾಂಧಿವಾಡದ ಎಬಿಎಂ ತೆಲುಗು ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ವಿಶೇಷ ರೀತಿಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಆಚರಣೆ ಮಾಡುವ ಮೂಲಕ ಜೀಸಸ್‌ಗೆ ಭಕ್ತಿ ಸಮರ್ಪಣೆ ಮಾಡಲಾಗಿದೆ. ಹಾಗಿದ್ದರೇ ಬನ್ನಿ ಹೇಗಿತ್ತು ಕ್ರಿಸ್ಮಸ್ ಹಬ್ಬದ ಆಚರಣೆ ನೋಡಿಕೊಂಡು ಬರೋಣ..
ಎಲ್ಲೆಡೆಯೂ ಹಬ್ಬದ ಸಂಭ್ರಮ, ಖುಷಿಯ ಕ್ಷಣಗಳೊಂದಿಗೆ ಹೆಜ್ಜೆ ಹಾಕಿದ ಮಕ್ಕಳು, ದೀಪಾಲಂಕಾರದಿಂದ ಕಂಗೊಳಿಸಿದ ಚರ್ಚ್. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಗಾಂಧಿವಾಡದ ಎಬಿಎಂ ತೆಲುಗು ಬ್ಯಾಪ್ಟಿಸ್ಟ್ ಚರ್ಚ್. ಹೌದು..ಯೇಸು ಪ್ರಭುವಿನ ಜನ್ಮದಿನದ ಅಂಗವಾಗಿ ಆಚರಿಸುವ ಮೇರಿ ಕ್ರಿಸ್ ಮಸ್ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಕ್ರಿಸ್‌ಮಸ್ ಮರ, ವಿವಿಧ ವಿನ್ಯಾಸದ ಬಣ್ಣ ಬಣ್ಣದ ಆಕಾಶಬುಟ್ಟಿ, ಬಲೂನು, ಬಗೆ ಬಗೆಯ ವಿದ್ಯುತ್ ದೀಪ, ಅಲಂಕಾರಿಕ ವಸ್ತುಗಳು, ಸಾಂಟಾಕ್ಲಾಸ್ ಟೋಪಿ ಹಾಗೂ ಉಡುಗೆಯಲ್ಲಿ ಎಂಬಿಎ ತೆಲುಗು ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಹಬ್ಬದ ಆಚರಣೆ ಕುರಿತು ಚರ್ಚ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಇನ್ನೂ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ, ಬೈಬಲ್ ಹಾಗೂ ಯೇಸುವಿನ ಬೋಧನೆಗಳನ್ನು ಹಿಂದಿ,ಇಂಗ್ಲಿಷ್, ಕನ್ನಡ, ತೆಲುಗು ಹೀಗೆ ಹಲವಾರು ಬಾಷೆಯಲ್ಲಿ ಪಠಣ ಮಾಡಲಾಯಿತು. ಸಾಂಪ್ರದಾಯಿಕ ಉಡುಗೆಯಲ್ಲಿ ಮಕ್ಕಳು ತಮ್ಮ ನೃತ್ಯದ ಮೂಲಕ ಜೀಸಸ್ ಪ್ರಭುವಿಗೆ ಭಕ್ತಿ ಸಮರ್ಪಣೆ ಮಾಡಿದರು. ಇದೆ ವೇಳೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ, ಮನುಕುಲದ ಉದ್ಧಾರಕ್ಕಾಗಿ ಬೋಧನೆ ಮಾಡಿರುವ ಯೇಸು ಪ್ರಭುವಿನ್ನು ಕೊಂಡಾಡಿದರು.
ಇನ್ನೂ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಕ್ಯಾಂಡಲ್ ಸರ್ವೀಸ್ ಮೂಲಕ ಯೇಸುವಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು. ಎಲ್ಲರೂ ಕೈಯಲ್ಲಿ ಮೇಣದ ಬತ್ತಿ ಹಿಡಿದು ವಿಶ್ವ ಶಾಂತಿಯ ಸಾಕಾರ ಮೂರ್ತಿಗೆ ಬೆಳಕಿನ ಗೌರವ ಸಲ್ಲಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಗೌರವ ಸಮರ್ಪಣೆ ಮಾಡಲಾಗಿದ್ದು, ಮಕ್ಕಳು ಇಂತಹದೊಂದು ಸಂಭ್ರಮವನ್ನು ಖುಷಿಯಿಂದ ಅನುಭವಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
24/12/2024 10:16 am