ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗತವೈಭವ ನಿಜಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಸಾಕಷ್ಟು ನಿದರ್ಶನಕ್ಕೆ ಸಾಕ್ಷಿಯಾಗುತ್ತಲೇ ಬರುತ್ತಿದೆ. ಐತಿಹಾಸಿಕ ಪರಂಪರೆಯ ನೆಲೆಗಟ್ಟಿನಲ್ಲಿ ಹುಬ್ಬಳ್ಳಿ ತನ್ನ ಹೆಸರು ಅಚ್ಚೊತ್ತುತ್ತಲೇ ಬಂದಿದೆ. ಅಂತಹುದೇ ಮತ್ತೊಂದು ಸನ್ನಿವೇಶಕ್ಕೆ ಹುಬ್ಬಳ್ಳಿ ಸಾಕ್ಷಿಯಾಗಿದೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಇದೀಗ ಶತಮಾನೋತ್ಸವ. ಆ ಅಧಿವೇಶನದ ಪೂರ್ವಭಾವಿ ಸಭೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದರು. ಅದರ ಅಧ್ಯಕ್ಷತೆಯನ್ನು ಇಲ್ಲಿನ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿ ವಹಿಸಿದ್ದರು ಎಂಬುದು ವಿಶೇಷ. ಹೌದು! ಕಾಂಗ್ರೆಸ್ ಪಕ್ಷ ಆಗ ರಾಜಕೀಯ ಪಕ್ಷವಾಗಿರಲಿಲ್ಲ. ಅದು ಸ್ವಾತಂತ್ರ್ಯ ಹೋರಾಟಕ್ಕೆ ಹುಟ್ಟುಹಾಕಿದ್ದ ಸಂಘಟನೆಯಾಗಿತ್ತು. ಆಗ ದೇಶಭಕ್ತರನ್ನು ಒಂದುಗೂಡಿಸುವುದು. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಹುರಿದುಂಬಿಸುವ ಕೆಲಸವನ್ನು ಗಾಂಧೀಜಿ ಕಾಂಗ್ರೆಸ್ ಮೂಲಕ ಮಾಡುತ್ತಿದ್ದರು.
ದೇಶಾದ್ಯಂತ ಸುತ್ತುತ್ತಿದ್ದರು. ಬೆಳಗಾವಿ ಅಧಿವೇಶನಕ್ಕೂ ಮುನ್ನ ಇಡೀ ದೇಶದಲ್ಲೇ ಸುತ್ತಾಡಿ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕ್ಕುವಂತೆ ಮಾಡುತ್ತಿದ್ದರು. ಅದೇ ರೀತಿ 1920ರಲ್ಲಿ ಬ್ರಿಟಿಷರೇ, ಭಾರತ ಬಿಟ್ಟು ತೊಲಗಿರಿ ಎಂಬ ಘೋಷಣೆ ಎಲ್ಲೆಡೆ ಮೊಳಗಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಗಾಂಧೀಜಿ ಬಂದಿದ್ದುಂಟು. ಆಗ ಇಲ್ಲೊಂದು ಸಮಾವೇಶ ಮಾಡುವ ಮೂಲಕ ಜನರನ್ನು ಒಗ್ಗೂಡಿಸಬೇಕು ಎಂಬ ಇಚ್ಛೆ ಅವರದ್ದಾಗಿತ್ತು.
ಅದರಂತೆ ಹುಬ್ಬಳ್ಳಿಯಲ್ಲಿ ಈಗಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿ ಇರುವ ಖಾಲಿ ಜಾಗೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಆ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಗಾಂಧೀಜಿ ಪಾಲ್ಗೊಂಡಿದ್ದರು. ಸಿದ್ಧಾರೂಢ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಾರೂಢ ಸ್ವಾಮೀಜಿ ಆಗ ಬರೋಬ್ಬರಿ 45 ನಿಮಿಷಗಳಿಗೂ ಹೆಚ್ಚು ಸುದೀರ್ಘ ಕನ್ನಡ, ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದರಂತೆ. ಆ ಭಾಷಣ ಈ ಭಾಗದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚುವಂತೆ ಮಾಡಿತ್ತು.
1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈಗ ಕಾಂಗ್ರೆಸ್ ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿದೆ. ಆದರೆ, ಆಗ ಸ್ವಾತಂತ್ರ ಹೋರಾಟಗಾರರನ್ನು ಹುರಿದುಂಬಿಸಲು ಹುಟ್ಟು ಹಾಕಿದ್ದ ಕಾಂಗ್ರೆಸ್ಸಿನ ಬೆಳಗಾವಿ ಅಧಿವೇಶನಕ್ಕೆ ಹುಬ್ಬಳ್ಳಿ ಸ್ವಾತಂತ್ರ್ಯ ಹೋರಾಟದ ಸಮಾವೇಶವೂ ಕೊಡುಗೆ ನೀಡಿತ್ತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/12/2024 09:19 pm