ಚಿತ್ರದುರ್ಗ: ರಾತ್ರಿ ನಗರದಲ್ಲಿ ನಡೆದ ಮ್ಯಾಕ್ಸ್ ಸಿನಿಮಾ ಇವೆಂಟ್‍ನಲ್ಲಿ ನಟ ಸುದೀಪ್ ಮಾತನಾಡುತ್ತಾ, ಚಿತ್ತದುರ್ಗ ಇಲ್ಲ ಅಂದರೆ ಹುಚ್ಚ ಸಿನಿಮಾ ಇಲ್ಲ. ಎಂದು ದಶಕಗಳ ಹಿಂದಿನ ನೆನಪು ಮೆಲುಕು ಹಾಕಿದರು.
ಹ್ಯಾಟ್ರಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ವೇದ ಸಿನಿಮಾದ ಆಡಿಯೋ ಚಿತ್ರದುರ್ಗದಲ್ಲಿ ಬಿಡುಗಡೆಯಾದಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ದುರ್ಗಕ್ಕೆ ಬರುತ್ತೇನೆ ಎಂದಿದ್ದೆ. ಅದರಂತೆ ಈಗ ದೊಡ್ಡ ಇವೆಂಟ್ ತೆಗೆದುಕೊಂಡು ಬಂದಿದ್ದೇನೆ ಎಂದು ದುರ್ಗದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಎರಡೂವರೆ ವರ್ಷ ಯಾವುದೇ ಸಿನಿಮಾ ಮಾಡದೆ ಕಾಯಿಸಿದ್ದಕ್ಕೆ ಕ್ಷಮೆ ಇರಲಿ ಎಂದು ತಮ್ಮ ಅಭಿಮಾನಿಗಳ ಬಳಿ ಕ್ಷಮೆ ಕೋರಿದ ಕಿಚ್ಚ, ಈ ವೇಳೆ ನೀವೆಲ್ಲಾ ಏನೇನು ಟ್ರೋಲ್ ಮಾಡಿದ್ದೀರಿ, ಮಾತಾಡಿದ್ದೀರಿ ಎಲ್ಲವನ್ನೂ ನೋಡಿದ್ದೇನೆ ಎಂದು ಕಾಲೆಳೆದರು.
ಇನ್ನು ಮುಂದೆ ಹೆಚ್ಚು ಸಿನಿಮಾ ಮಾಡಲು ಪ್ರಯತ್ನ ಮಾಡುತ್ತೇನೆ. ಡಿ.25ಕ್ಕೆ ಮ್ಯಾಕ್ಸ್ ಸಿನಿಮಾ ತೆರೆ ಕಾಣುತ್ತಿದೆ. ಬಹಳ ಸಂತೋಷವಾಗುತ್ತಿದೆ ಎಂದರು.
ಇದೇ ವೇಳೆ, ಉಪೇಂದ್ರ ಅವರ ಸಿನಿಮಾಕ್ಕೆ ನೀವೆಲ್ಲಾ ಸ್ಪಂದಿಸಿರುವ ರೀತಿ ನೋಡಿ ಖುಷಿಯಾಗಿದೆ. ಚಿತ್ರ ರಂಗದಲ್ಲಿರುವ ಸಾಕಷ್ಟು ಜನ ಹೊಸಬರು ಬಂದಿದ್ದಾರೆ ಎಲ್ಲರಿಗೂ ಒಳ್ಳೆಯದಾಗಬೇಕು.
ನನ್ನ ಸ್ನೇಹಿತರು ಒಗ್ಗಟ್ಟಾಗಿ ಇಲ್ಲಿಗೆ ಆಗಮಿಸಿ ಈ ಚಿತ್ರವನ್ನು ಬೆಂಬಲಿಸಿದ್ದಾರೆ. ಅದೇ ರೀತಿಯಲ್ಲಿ ಇಡೀ ಚಿತ್ರರಂಗ ಒಗ್ಗಟ್ಟಾಗಿ ಹೋಗಬೇಕು.
ಬೇರೆ ರಾಜ್ಯದಿಂದ ಬರುವ ಹೊಸ ಚಿತ್ರಗಳಿಗೆ ಮಾಡುವಷ್ಟೇ ಬೆಂಬಲವನ್ನು ಕನ್ನಡದ ಹೊಸಬರ ಚಿತ್ರಗಳಿಗೂ ಮಾಡಿ. ಇಲ್ಲದಿದ್ದರೆ ನಾಳೆ ಚಿತ್ರವೂ ಇರುವುದಿಲ್ಲ, ಚಿತ್ರಮಂದಿರವೂ ಇರುವುದಿಲ್ಲ. ಕನ್ನಡ ಚಿತ್ರರಂಗದ ಎಲ್ಲ ಸ್ನೇಹಿತರು ಸದಾ ಒಗ್ಗಾಟ್ಟಾಗಿರಬೇಕು ಎಂದು ಸುದೀಪ್ ಸಲಹೆ ನೀಡಿದರು.
Kshetra Samachara
23/12/2024 05:33 pm