ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಬೆಲ್ದಾಳೆ ಪ್ರಶ್ನೆಗೆ ಸಿಎಂ ಭರವಸೆ- ದಕ್ಷಿಣ ಕ್ಷೇತ್ರ ಎಸ್‌ಟಿ ಓಣಿ ಅಭಿವೃದ್ಧಿಗೆ ಹೆಚ್ಚು ಅನುದಾನ

ದಕ್ಷಿಣ ವಿಧಾನಸಭೆ ಕ್ಷೇತ್ರದ ಪರಿಶಿಷ್ಟ ಪಂಗಡಗಳ(ಎಸ್ ಟಿ) ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಬರುವ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಎಸ್‌ಟಿ ಬಡಾವಣೆಗಳ ಅಭಿವೃದ್ಧಿಗೆ ಎರಡು ವರ್ಷದಿಂದ ನಯಾ ಪೈಸೆ ಅನುದಾನ ನೀಡಿಲ್ಲ ಎಂದು ಸದನದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅನುದಾನ ಏಕೆ ನೀಡಿಲ್ಲ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಮುಂದೆ ಹೆಚ್ಚಿನ ಅನುದಾನ ಕಲ್ಪಿಸಿ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು. ಅನುದಾನ ಕೊಡುವುದರಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.

ದಕ್ಷಿಣ ಕ್ಷೇತ್ರದಲ್ಲಿ ಬೀದರ್ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕುರುಬರು, ಕೋಲಿ/ಕಬ್ಬಲಿಗರು ಸೇರಿ 65 ಸಾವಿರಕ್ಕೂ ಹೆಚ್ಚು ಎಸ್‌ಟಿ ಸಮಾಜದವರು ಇದ್ದಾರೆ. ಆದರೆ, ಎರಡು ವರ್ಷಗಳಿಂದ ಈ ಬಡಾವಣೆ ಸೌಕರ್ಯಕ್ಕೆ ನಯಾಪೈಸೆ ಕೊಟ್ಟಿಲ್ಲ. ಹೀಗಾಗಿ ಓಣಿಗಳಲ್ಲಿ ರಸ್ತೆ, ಚರಂಡಿ, ಹೈಮಾಸ್ಟ್ ಅಳವಡಿಕೆ ಸೇರಿದಂತೆ ಯಾವುದೇ ಕೆಲಸ ಆಗಿಲ್ಲ. ನಾವು ಈ ಬಡಾವಣೆ ಜನರಿಗೆ ಏನು ಉತ್ತರಿಸಬೇಕು? ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸಿದಾಗ ಸಿಎಂ ಪರವಾಗಿ ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ಉತ್ತರ ನೀಡಿದ್ದರು. ದಕ್ಷಿಣ ಕ್ಷೇತ್ರಕ್ಕೆ 30 ಕೋಟಿ ರೂ. ಒದಗಿಸಿದ್ದಾಗಿ ತಿಳಿಸಿದ್ದರು. ಈ ಮಾಹಿತಿ ಶುದ್ಧ ತಪ್ಪು. ಅಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ವಿಷಯದ ಗಂಭೀರತೆ ಪರಿಗಣಿಸಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಆಗ್ರಹ ಮಾಡಿದ್ದೇನೆ. ಆದರೆ ಈವರೆಗೆ ಏನೂ ಪ್ರಯೋಜನವಾಗಿಲ್ಲ ಎಂದು ಡಾ.ಬೆಲ್ದಾಳೆ ಅತೃಪ್ತಿ ವ್ಯಕ್ತಪಡಿಸಿದರು.

ಈ ಬಗ್ಗೆಯೂ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಎಸ್‌ಟಿ ಬಡಾವಣೆಗಳಲ್ಲಿ ಸೌಕರ್ಯಕ್ಕಾಗಿ ಪ್ರಗತಿ ಕಾಲೋನಿ ಯೋಜನೆಯಡಿ ಕಳೆದ ಸಲ ರಾಜ್ಯಕ್ಕೆ ಒಟ್ಟು 30 ಕೋಟಿ ರೂ. ಒದಗಿಸಲಾಗಿತ್ತು. ದಕ್ಷಿಣ ಕ್ಷೇತ್ರಕ್ಕೆ ಅನುದಾನದ ಹಂಚಿಕೆಯಾಗದಿರುವುದು ಮತ್ತು ಅಧಿಕಾರಿಗಳು ವಿವರಣೆ ತಪ್ಪು ನೀಡಿದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಕುರುಬರು, ಕೋಲಿ/ ಕಬ್ಬಲಿಗರು ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿರುವುದು ನನಗೆ ಗೊತ್ತಿದೆ. ಹೀಗಾಗಿ ಮುಂದೆ ಹೆಚ್ಚಿನ ಹಣ ಖಂಡಿತಾ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ನಿಗಮಲ್ಲಿ ಬರುವ ಸೌಲಭ್ಯಗಳನ್ನು ಸಹ ಕಡಿತಗೊಳಿಸಲಾಗಿದೆ. ಸ್ವಉದ್ಯೋಗದ ನೇರ ಸಾಲಕ್ಕೆ ಕೇವಲ 5ಸಾವಿರ , ಸ್ವಾವಲಂಬಿ ಸಾರಥಿಗೆ 1ಸಾವಿರ , ಗಂಗಾ ಕಲ್ಯಾಣಕ್ಕೆ 4 ಸಾವಿರ, ಮೈಕ್ರೋ ಫೈನಾನ್ಸ್ 10 ಸಾವಿರ, ಉದ್ಯಮಶೀಲತೆಗೆ ಒಂದೂ ಗುರಿ ಇಲ್ಲ. ಬೆರಳೆಣಿಕೆಯಷ್ಟು ಗುರಿಗೆ ನೂರಾರು, ಸಾವಿರಾರು ಅರ್ಜಿ ಬಂದಿವೆ. ನಾವು ಹೇಗೆ ಫಲಾನುಭವಿ ಆಯ್ಕೆ ಮಾಡಬೇಕು ಅರ್ಥವಾಗುತ್ತಿಲ್ಲ. ಈ ಯೋಜನೆಗಳ ಗುರಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸಿಎಂಗೆ ಮನವಿ ಮಾಡಿದರು. ಈ ಬೇಡಿಕೆ ಬಗ್ಗೆಯೂ ಪರಿಶೀಲಿಸಿ ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.

Edited By : Manjunath H D
PublicNext

PublicNext

18/12/2024 09:44 pm

Cinque Terre

34.97 K

Cinque Terre

1

ಸಂಬಂಧಿತ ಸುದ್ದಿ