ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಡಿಸೆಂಬರ್ 17ರಂದು ಕನ್ನಡಕ್ಕಾಗಿ ಓಟ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ಸಾಹಿತ್ಯ ಸಮ್ಮೇಳನದ ನಗರ ಅಲಂಕಾರ ಸಮಿತಿ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಕನ್ನಡಕ್ಕಾಗಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ರವಿಕುಮಾರ್ ಅವರು, ಜಿಲ್ಲೆಯ ನಗರ ಪ್ರದೇಶದಲ್ಲಿ ಸುಮಾರು 1.50 - 2 ಲಕ್ಷ ಜನಸಂಖ್ಯೆಯಿದ್ದು, ಅವರೆಲ್ಲರೂ ಕನ್ನಡ ಸಾಹಿತ್ಯ ಸಮ್ಮೇಳನದ ಆಚರಣೆಯಲ್ಲಿ ತೊಡಗಬೇಕೆಂಬ ಉದ್ದೇಶದಿಂದ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 17 ರಂದು ಜಿಲ್ಲಾ ಕ್ರೀಡಾಂಗಣದಿಂದ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ ಸಂಜಯ ವೃತ್ತ, ಬೆಂಗಳೂರು -ಮೈಸೂರು ಹೆದ್ದಾರಿ ಮಾರ್ಗವಾಗಿ ಸ್ಯಾಂಜೊ ಆಸ್ಪತ್ರೆಯ ಹಿಂಭಾಗದವರೆಗೆ ಸಮ್ಮೇಳನ ನಡೆಯುವ ಸ್ಥಳದವರೆಗೆ ನಡೆಯಲಿದೆ ಎಂದರು.
ಸ್ಪರ್ಧೆಯಲ್ಲಿ ಎಲ್ಲರ ಬೆಂಬಲ ಅಗತ್ಯವಾಗಿದ್ದು, ಜಿಲ್ಲೆಯ ಎಲ್ಲಾ ವಯೋಮಾನದವರು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದರು.
PublicNext
08/12/2024 07:53 am