ಮಂಡ್ಯ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (KRS ಪಾರ್ಟಿ) ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರು ಗುಜರಾತಿನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಮನವಿ ನೀಡಲು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ನೀಡಲು ಮಂಗಳೂರಿನಿಂದ ದೆಹಲಿಗೆ ಐದು ಜನರ ತಂಡ ಪಾದಯಾತ್ರೆ ಹೊರಟಿತ್ತು.
55ನೇ ದಿನದ ಪಾದ ಯಾತ್ರೆ ಇಂದು ಗುಜರಾತಿನ ಭರೂಚ್ ನಗರ ತಲುಪಿತ್ತು. ಈ ಪಾದ ಯಾತ್ರೆಯಲ್ಲಿದ್ದವರಿಗೆ ನೈತಿಕ ಬೆಂಬಲ ನೀಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರೂ ಸಹ ನಿನ್ನೆ ಮತ್ತು ಇಂದು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭರೂಚ್ ನಗರದ ಬಳಿಯ ಹೆದ್ದಾರಿಯಲ್ಲಿ ಲಾರಿಯೊಂದು ರಸ್ತೆಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಹರಿದು, KRS ಪಕ್ಷದ ಕಾರ್ಯಾಧ್ಯಕ್ಷ ಎಸ್.ಎಚ್. ಲಿಂಗೇಗೌಡ ಮತ್ತು ಮಂಗಳೂರಿನ ಕುಂಜಿ ಮೂಸಾ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರೂ ಸೇರಿದಂತೆ ನಾಲ್ಕು ಜನರಿಗೆ ತೀವ್ರ ಗಾಯಗಳಾಗಿವೆ. ಅವರು ಭರೂಚ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
KRS ಪಕ್ಷ ಆರಂಭವಾದಾಗಿನಿಂದಲೂ ಪಕ್ಷದ ಅವಿಭಾಜ್ಯ ಅಂಗ ಮತ್ತು ಅತಿದೊಡ್ಡ ಬಲವಾಗಿದ್ದ ಮತ್ತು ಕಳೆದ ಆರು ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ದುಡಿದು ಇತ್ತೀಚೆಗೆ ತಾನೆ ಕಾರ್ಯಾಧ್ಯಕ್ಷ ರಾಗಿ ನೇಮಕವಾಗಿದ್ದ ಲಿಂಗೇಗೌಡರ ನಿಧನಕ್ಕೆ ಪಕ್ಷ ತೀವ್ರ ದುಃಖ ವ್ಯಕ್ತಪಡಿಸುತ್ತದೆ ಎಂದು ಕೆಆರ್ ಎಸ್ ಪಕ್ಷದ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
11/12/2024 11:04 pm