ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಆಯೋಜಿಸಲಾಗುವ ಪುಸ್ತಕ ಮಳಿಗೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸುವ ಆನ್ ಲೈನ್ ಮಳಿಗೆ ನೋಂದಣಿ ಜಾಲತಾಣವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಚಲುವರಾಯಸ್ವಾಮಿ ಚಾಲನೆ ನೀಡಿದರು. ಇದೇ ವೇಳೆ ಸಾಂಕೇತಿಕವಾಗಿ ಆನ್ ಲೈನ್ ನೋಂದಣಿ ಮಾಡಿದ ವ್ಯಾಪಾರಿಗಳಿಗೆ ದೃಢೀಕರಣ ಪತ್ರ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, 491 ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಗೂ 284 ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಮಳಿಗೆಗಳನ್ನು ಕಾಯ್ದಿರಿಸಲು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಕನ್ನಡ ಸಾಹಿತ್ಯ ಸಮ್ಮೇಳನದ ಆನ್ ಲೈನ್ ಪೋರ್ಟಲ್ https://kannadasahithyaparishattu.in/sammelana2024ರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಡಿ.6ರಿಂದ ಡಿ.13ರ ವರೆಗೆ ಸ್ಟಾಲ್ ಗಳ ಆನ್ ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. 10*10 ವಿಸ್ತೀರ್ಣದ ಮಳಿಗೆಗಳಿಗೆ 4 ಸಾವಿರ 10*15 ವಿಸ್ತೀರ್ಣದ ಮಳಿಗೆಗಳಿಗೆ 6 ಸಾವಿರ ರೂ. ನಿಗದಿ ಪಡಿಸಲಾಗಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್ ಲೈನ್ ನೋಂದಣಿ ಮಾಡಲಾಗಿದೆ ಎಂದರು.
PublicNext
06/12/2024 10:42 pm