ಬೆಳಗಾವಿ : ರಸ್ತೆ ತಿಳಿಯದೇ ಗೂಗಲ್ ಮ್ಯಾಪ್ ನಂಬಿದ್ದಕ್ಕಾಗಿ ಕುಟುಂಬವೊಂದು ಕಾಡಿನಲ್ಲೇ ರಾತ್ರಿ ಕಳೆದ ಘಟನೆ ಬೆಳಗಾವಿಯ ಖಾನಾಪೂರದಲ್ಲಿ ನಡೆದಿದೆ.
ಬಿಹಾರದ ರಾಜದಾಸ್ ರಣಜಿತ್ ದಾಸ್ ಕುಟುಂಬ ಉಜ್ಜಯಿನಿಯಿಂದ ಗೋವಾ ಪ್ರವಾಸಕ್ಕೆ ಹೊರಟಿದ್ದರು. ಗೋವಾದಲ್ಲಿ ತಾವು ತಲುಪಬೇಕಿದ್ದ ಸ್ಥಳದ ಲೊಕೇಶನ್ ಹಾಕಿದ ಅವರು ಪ್ರಯಾಣ ಬೆಳೆಸಿದ್ದರು.
ಗೂಗಲ್ ಮ್ಯಾಪ್ ಪ್ರಕಾರವೇ ಹೋಗುತ್ತಿದ್ದ ಅವರು ದಾರಿ ಸಾಗಿದಂತೆ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗಮಧ್ಯದ ಮುಖ್ಯ ರಸ್ತೆಯಿಂದ 7-8 ಕಿ.ಮೀ ಒಳಗೆ ಭೀಮಗಡ ವನ್ಯಧಾಮದ ಅರಣ್ಯದೊಳಗೆ ಹೊಕ್ಕಿದ್ದಾರೆ. ಕಗ್ಗತ್ತಲ ಕಾಡಿನಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡಾ ಸಿಗದೇ ದಟ್ಟ ಅರಣ್ಯದಲ್ಲಿ ಹಾದಿ ತಪ್ಪಿ ಕುಟುಂಬ ಸಿಲುಕಿಕೊಂಡಿದೆ.
ಇದರಿಂದ ಕಂಗೆಡದ ರಾಜದಾಸ್ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ರಾತ್ರಿ ಅಲ್ಲೇ ಕಳೆದಿದ್ದಾರೆ. ಹಾಗೋ ಹೀಗೋ ಜೀವ ಕೈಯಲ್ಲಿ ಹಿಡಿದು ರಾತ್ರಿ ಕಳೆದ ಕುಟುಂಬ, ಬೆಳಗಾಗುತ್ತಲೇ ತಾವಿದ್ದ ಸ್ಥಳದಿಂದ ಮೂರ್ನಾಲ್ಕು ಕಿಲೋಮೀಟರ್ ಕ್ರಮಿಸಿ, ಮೊಬೈಲ್ ನೆಟ್ವರ್ಕ್ ದೊರೆತ ಬಳಿಕ ಅವರು 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂ ಜತೆ ಸಂಪರ್ಕ ಸಾಧಿಸಿ ವಿಚಾರ ಹೇಳಿದ್ದಾರೆ. ತಕ್ಷಣ ಕುಟುಂಬದ ಸಹಾಯಕ್ಕೆ ನೆರವಾದ ಖಾನಾಪೂರ ಠಾಣಾ ಪೊಲೀಸರು ಕುಟುಂಬವನ್ನು ರಕ್ಷಿಸಿದ್ದಾರೆ.
Kshetra Samachara
06/12/2024 01:29 pm