ರಾಯಭಾಗ: ಸೋಮವಾರದ ಸಂತೆ ಮುಗಿಸಿ ಮನೆಗೆ ಬಂದ ಯುವಕ, ಅದೇ ರಾತ್ರಿ ಯಾರದ್ದೋ ಬೈಕ್ ಮೇಲೆ ಊಟ ಮಾಡಿ ಬರುವೆ ಎಂದು ಹೋಗಿ ಮನೆಗೆ ಬಾರದೇ ರೈಲು ಹಳಿ ಮಧ್ಯೆ ಹೆಣವಾಗಿ ಪತ್ತೆಯಾಗಿದ್ದಾನೆ!
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಬೀರನಾಳ ಗ್ರಾಮದ ಯುವಕ ಬೀರಪ್ಪ ಕರಿಹೊಳೆ (29) ಮೃತ ದುರ್ದೈವಿ. ಈತ ಸೋಮವಾರ ರಾಯಭಾಗ ಪಟ್ಟಣದ ಸಂತೆ ಮುಗಿಸಿ ಮನೆಗೆ ಬಂದು ತನ್ನ ಎರಡು ಮಕ್ಕಳ ಜೊತೆ ಕಾಲ ಕಳೆಯುತ್ತಾ ಮನೆಯಲ್ಲಿರುವಾಗ ಯಾರೋ ಒಬ್ಬ ಬಂದು ಊಟ ಮಾಡಿ ಬರುವುದಾಗಿ ಹೇಳಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನಂತೆ.
ತಡರಾತ್ರಿಯಾದರೂ ಬೀರಪ್ಪ ಮನೆಗೆ ಬಾರದೇ ಇರುವುದನ್ನು ಕಂಡು ಕುಟುಂಬಸ್ಥರು ಆತನ ಗೆಳೆಯರು ಹಾಗೂ ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆದರೆ, ಊಟಕ್ಕೆ ಅಂತ ಹೋದ ಬೀರಪ್ಪ ಮನೆಗೆ ಬಾರದೆ ರಾಯಭಾಗ ಪಟ್ಟಣದ ಹೊರವಲಯದ ಬ್ಯಾಕೂಡ ರೈಲ್ವೆ ಹಳಿ ಮೇಲೆ ಹೆಣವಾಗಿ ಪತ್ತೆಯಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು!
ಬೀರಪ್ಪನ ಮೃತದೇಹ ಕಂಡ ಕುಟುಂಬಸ್ಥರು ಅಳುತ್ತಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದು ಕೊಲೆಯೋ? ಅಥವಾ ಅಪಘಾತವೋ? ಎಂಬುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
PublicNext
04/12/2024 09:55 pm