ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೆಂದೇ ಗುರುತಿಸಿದ ವ್ಯಾಪಾರದ ಜಾಗ, ಟಿವಿಸಿ ಕಮಿಟಿಯಲ್ಲಿ ಅನುಮೋದನೆಗೊಂಡ ವ್ಯಾಪಾರ ವಲಯಗಳನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪ್ರಮುಖರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರವು ನಿರುದ್ಯೋಗ ನಿವಾರಣೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದ ಹಾಗೆಯೇ ಬೀದಿ ಬದಿ ವ್ಯಾಪಾರಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಂಗಾಂಗ ನ್ಯೂನತೆ ಹೊಂದಿದವರು, ವಿಧವೆಯರು, ಆರ್ಥಿಕ ದುರ್ಬಲ ವರ್ಗದವರು, ಪಾಲಿಕೆಗೆ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿಗೆ ಹಾಗೂ ಪಿಎಂ ಸ್ವ-ನಿಧಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಟಿವಿಸಿ ಕಮಿಟಿಯ ಸದಸ್ಯರು ಪರಿಶೀಲನೆ ಮಾಡಿ ಒಂದು ಕುಟುಂಬಕ್ಕೆ ಒಂದು ಬೀದಿ ಬದಿ ಗುರುತಿನ ಕಾರ್ಡ್ ಮತ್ತು ಪ್ರಮಾಣ ಪತ್ರ ಮೇರೆಗೆ ಸಾಲ ನೀಡಲಾಗುತ್ತದೆ. ಬಹಳಷ್ಟು ಜನರಿಗೆ ಒಂದೇ ಕುಟುಂಬದ ಹಲವು ಸದಸ್ಯರಿಗೆ ಕಾರ್ಡ್ ಲಭ್ಯವಾಗಿದ್ದು, ಇಂತಹ ಕಾರ್ಡ್ ಗಳನ್ನು ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಿವಿಸಿ ಕಮಿಟಿಯಲ್ಲಿ ಅನುಮೋದನೆಗೊಂಡ ವ್ಯಾಪಾರ ವಲಯಕ್ಕೆ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಿ ಫುಟ್‌ಪಾತ್ ಅತಿಕ್ರಮಣ ಮುಕ್ತಗೊಳಿಸಿ ಸಾರ್ವಜನಿಕರ ಹೋರಾಟಕ್ಕೆ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ವಿವಿಧ ಇಲಾಖೆಗಳಿಂದ ಬೀದಿ ಬದಿ ವ್ಯಾಪಾರಿಗಳ ಸೌಲಭ್ಯಕ್ಕೆಂದು ಬಂದ ಅನುದಾನಗಳು ಟಿವಿಸಿ ಸದಸ್ಯರ ಗಮನಕ್ಕೆ ಬಂದಿರುವುದಿಲ್ಲ. ಅವುಗಳನ್ನು ಸಂಪೂರ್ಣ ತನಿಖೆಗೆ ಒಳಪಡಿಸಿ ಬೀದಿಬದಿ ವ್ಯಾಪಾರಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
Kshetra Samachara
04/12/2024 07:25 pm