ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಈಗಿರುವ ಶಾಖೆಗಳ ಜೊತೆಗೆ ಇನ್ನೂ ಮೂರು ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಇದೇ ತಿಂಗಳು ಚಾಲನೆ ನೀಡಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದ್ದಾರೆ.
22 ಹೊಸ ಶಾಖೆಗಳನ್ನು ತೆರೆಯಲು ಅನುಮತಿ ಕೋರಿದ್ದು, ಈಗ ಮೂರು ಶಾಖೆಗಳಿಗೆ ಆರ್‌ಬಿಐ ಅನುಮತಿ ನೀಡಿದೆ ಎಂದ ಅವರು, ಡಿ. 6ರಂದು ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ 29ನೇ ಶಾಖೆಯನ್ನೂ ಡಿ. 12 ರಂದು ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪದಲ್ಲಿ 30ನೇ ಶಾಖೆಯನ್ನೂ ಹಾಗೂ ಡಿ. 18ರಂದು ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳಿನಲ್ಲಿ 31ನೇ ಶಾಖೆಯನ್ನೂ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ವಿಧಾನಮಂಡಲದ ಅಧಿವೇಶನದ ಬಳಿಕ ವಿದ್ಯುಕ್ತವಾಗಿ ಈ ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದ ಅವರು,
2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ರೂ.ಲಾಭ ಗಳಿಸಿದ ಬ್ಯಾಂಕ್ 10.58 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 138.98 ಕೋಟಿ ಷೇರು ಬಂಡವಾಳ ಹೊಂದಿದ್ದಲ್ಲದೆ, 67.46 ಕೋಟಿ ರೂ.ನಿಧಿಗಳನ್ನು ಹೊಂದಿದೆ. 2332.29 ಕೋಟಿ ರೂ.ದುಡಿಯುವ ಬಂಡವಾಳ ಹೊಂದಿದ್ದು, 1462.78 ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 50383 ರೈತರಿಂದ 22.60 ಕೋಟಿ ರೂ. ವಿಮಾ ಪ್ರೀಮಿಯಂ ಪಾವತಿಯಾಗಿದ್ದು, ಇದರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಒಂದರಿಂದಲೇ 23094 ರೈತರಿಂದ 10.13 ಕೋಟಿ ರೂ. ಜಮಾ ಪಡಿಸಲಾಗಿದೆ ಎಂದ ಅವರು, ಬೆಳೆ ವಿಮೆ ಯೋಜನೆಯಡಿ 62887 ರೈತರಿಂದ 26.73 ಕೋಟಿ ರೂ. ವಿಮಾ ಪ್ರೀಮಿಯಂ ಪಾವತಿಯಾಗಿದೆ. ಇದರಲ್ಲಿ ತಮ್ಮ ಬ್ಯಾಂಕಿನ ಮೂಲಕವೇ 24822 ರೈತರಿಂದ 10.83 ಕೋಟಿ ರೂ. ಜಮಾ ಮಾಡಿಸಲಾಗಿದೆ.
ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದ್ದಾಗಿಯೂ 2024-25ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 120000 ರೈತರಿಗೆ 1200 ಕೋಟಿ ರೂ. ಅಲ್ಫಾವಧಿ ಕೃಷಿ ಬೆಳೆ ಸಾಲದ ಗುರಿಯನ್ನು ಹೊಂದಿದ್ದು, ಪ್ರಸ್ತುತ 105640 ರೈತರಿಗೆ 1180.12 ಕೋಟಿ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.99.07ರಷ್ಟಿರುತ್ತದೆ ಎಂದು ತಿಳಿಸಿದರು.
PublicNext
04/12/2024 08:49 pm