ತುಮಕೂರು : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 2ರಂದು ಜರುಗಿದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಬೇಕೆಂದು ಶಿರಾ ನಗರದ ರಾಬಿಯಾ ಕೋಂ ಅಸ್ಲಾಂ ಪಾಷ ಎಂಬ ಮಹಿಳೆಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಒಂದೇ ದಿನದಲ್ಲಿ 20*30 ಅಳತೆಯ ನಿವೇಶನವನ್ನು ಹಂಚಿಕೆ ಮಾಡಿ ಠರಾವು ಅಂಗೀಕರಿಸಲಾಗಿದೆ.
ಮಹಿಳೆಯ ಬಡತನವನ್ನು ಮನಗಂಡು ಆಶ್ರಯ ಯೋಜನೆಯಡಿ ರಾಬಿಯಾ ಅವರಿಗೆ ನಿವೇಶನ ನೀಡಲು2024 ರ ಸೆಪ್ಟೆಂಬರ್ 25/ರಂದು ನಡೆದ ಶಿರಾ ಆಶ್ರಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಜಿ.ಪರಮೇಶ್ವರ ಅವರು ರಾಬಿಯಾಗೆ ನಿರ್ಣಯ ಕೈಗೊಂಡ ಆಶ್ರಯ ಸಮಿತಿ ಸಭೆಯ ನಡಾವಳಿ ಪತ್ರವನ್ನು ನೀಡಿದರು.
ಶಿರಾ ನಗರದಲ್ಲಿ ಆಶ್ರಯ ಯೋಜನೆಯಡಿ ರಚಿಸಲಾಗಿರುವ ನಿವೇಶನಗಳ ಪೈಕಿ ಸರ್ವೇ ನಂಬರ್ 100 ರಲ್ಲಿ 20*30 ಅಳತೆಯ ಒಂದು ನಿವೇಶನವನ್ನು ರಾಬಿಯಾ ಅವರ ಕುಟುಂಬಕ್ಕೆ ಹಂಚಿಕೆ ಮಾಡಲು ತಿರ್ಮಾನಿಸಲಾಗಿದೆ. ಅರ್ಜಿದಾರರ ಸೂಕ್ತ ದಾಖಲೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಿ ನಿಯಮಾನುಸಾರ ಹಕ್ಕು ಪತ್ರ ಸೃಜಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಸೇರಿದಂತೆ ಮತ್ತಿತರರಿದ್ದರು.
Kshetra Samachara
04/12/2024 08:10 am