ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ಕ್ಕೆ ತುಮಕೂರಿಗೆ ಆಗಮಿಸಿಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 938.03 ಕೋಟಿ ವೆಚ್ಚದ ಸುಮಾರು 825 ಕಾಮಗಾರಿಗಳಿಗೆ ಶಂಕುಸ್ಥಾಪನೆ, 95,22 ಕೋಟಿ ವೆಚ್ಚದ 66 ನೂತನ ಕಾಮಗಾರಿಗಳ ಉದ್ಘಾಟನೆ ಮತ್ತು 226,96ಕೋಟಿ ವೆಚ್ಚದ ಸುಮಾರು 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು, ಸಲಕರಣೆ ಮತ್ತು ಧನ ಸಹಾಯ ಚೆಕ್ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದರು.
ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ 1.50 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ 150 ಕೋಟಿ ವೆಚ್ಚದಲ್ಲಿ 41 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸ್ಥಳ ಪಿ.ಗೊಲ್ಲಹಳ್ಳಿ/ಸೋರೆಕುಂಟೆ ಗ್ರಾಮದ ಸ್ಥಳಕ್ಕೆ ಬೇಟಿ ನೀಡಿ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಂತರ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಾಣ ಮಾಡಲಾಗಿರುವ ಬೃಹತ್ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಸವಲತ್ತು/ ಸಲಕರಣೆ ಯಂತ್ರೋಪಕರಣಗಳ ವೀಕ್ಷಣೆ ಮಾಡುವುದರೊಂದಿಗೆ ಸಲಕರಣೆ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ಎಂ ಎಲ್ ಸಿ ರಾಜೇಂದ್ರ ರಾಜಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾಪಂಚಾಯತ್ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ತುಮಕೂರು ಮಹಾನಗರ ಪಾಲಿಕೆ ಬಿ.ವಿ. ಅಶ್ವಿಜಾ ಸೇರಿದಂತೆ ಇತರರು ಇದ್ದರು.
Kshetra Samachara
29/11/2024 04:30 pm