ತುಮಕೂರು : ಡಿಸೆಂಬರ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಡಕ್ ಸೂಚನೆ ನೀಡಿದ್ದಾರೆ.
ತುಮಕೂರಿನಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಡಿಸೆಂಬರ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದ ಕುರಿತು ಈಗಾಗಲೇ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆಯಾ ಇಲಾಖೆ ಕಾಮಗಾರಿಗಳ ಉದ್ಘಾಟನೆ ಸಂಬಂಧಿಸಿದ ಕಾಮಗಾರಿಗಳು ಶಿಲಾನ್ಯಾಸದ ಫಲಕ ಸೇರಿದಂತೆ ವಿವಿಧ ಸಿದ್ಧತೆಗಳಿಗೆ ಸೂಚನೆ ನೀಡಲಾಗಿದೆ.
ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದಂತೆ ಹಾಗೂ ಲೋಪವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈಗಾಗಲೇ ಮುದ್ರಿಸಿ ಎಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಆಯಾ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ನಿಖಟ ಪೂರ್ವ ಜನಪ್ರತಿನಿಧಿಗಳಿಗೆ ಖುದ್ದು ನೀಡುವಂತೆ ಸೂಚಿಸಿದರು.
ಅಲ್ಲದೆ, ಸವಲತ್ತು ವಿತರಣೆ ಸಂಬಂಧಿಸಿದಂತೆ ಆಯ್ಕೆಯಾದ ಫಲಾನುಭವಿಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಜೋಪಾನವಾಗಿ ಕರೆತಂದು ಕಾರ್ಯಕ್ರಮ ಮುಗಿದ ನಂತರ ಅವರನ್ನು ಸ್ವಸ್ಥಳಕ್ಕೆ ಹಿಂದಿರುಗಿಸುವ ಹೊಣೆಯನ್ನು ಆಯಾ ಜವಾಬ್ದಾರಿಯುತ ಅಧಿಕಾರಿಗಳು ನಿರ್ವಹಿಸುವಂತೆ ಅವರು ತಿಳಿಸಿದರು.
ಈಗಾಗಲೇ ಸೂಚಿಸಿರುವಂತೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೊಳ್ಳುವ ಕಾಮಗಾರಿಗಳ ಶಿಲಾನ್ಯಾಸ ಫಲಕವನ್ನು ಶಿಷ್ಟಾಚಾರ ಇಲಾಖೆಯ ಅನುಮೋದನೆಯೊಂದಿಗೆ ಸಿದ್ಧಗೊಳಿಸಲು ಸೂಚಿಸಲಾಯಿತು.
Kshetra Samachara
25/11/2024 11:10 am