ಹೊಳಲ್ಕೆರೆ: ಸಾರ್ವಜನಿಕರಿಗೆ ಪೂರಕವಾದ ಆರೋಗ್ಯ ಸೇವೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿರಿಗೆರೆ ಗ್ರಾಮದಲ್ಲಿ ಐದು ಕೋಟಿ ರೂ.ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವೈದ್ಯಾಧಿಕಾರಿಗಳ, ಶುಶ್ರೂಷಕಿಯರ ಗ್ರೂಪ್ ಡಿ. ನೌಕರರ ಹಾಗೂ ಫಾರ್ಮಸಿಸ್ಟ್, ಎಕ್ಸರೆ ಸಿಬ್ಬಂದಿಗಳ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಚಿಕ್ಕಜಾಜೂರಿನಲ್ಲಿ ಹದಿನೈದು ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು. ಎಲ್ಲಾ ಕಡೆ ಆಸ್ಪತ್ರೆ, ವಸತಿ ಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಹಿರೇಬೆನ್ನೂರು ಸರ್ಕಲ್‍ನಿಂದ ಸಾಸಲು ಸರ್ಕಲ್‍ಗೆ ಗುಣಮಟ್ಟದ ರಸ್ತೆಗಾಗಿ 105 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ. ಮದಕರಿಪುರದಿಂದ ಚಿತ್ರದುರ್ಗದ ಬಾರ್ಡರ್‍ವರೆಗೆ ರಸ್ತೆ ನಿರ್ಮಾಣಕ್ಕಾಗಿ 65 ಕೋಟಿ ರೂ.ಗಳು ಮಂಜೂರಾಗಿದೆ. ಸಿಸಿ ರಸ್ತೆಗೆ ಮೂರು ಕೋಟಿ ರೂ. ಮಂಜೂರಾಗಿ ಟೆಂಡರ್ ಕರೆಯಲಾಗಿದೆ. ಒಟ್ಟಾರೆ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ವೈದ್ಯರುಗಳ ಮೇಲಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ಉಪಾಧ್ಯಕ್ಷ ಕರಿಯಪ್ಪ, ಸದಸ್ಯರುಗಳಾದ ಮೋಹನ್, ಸಿದ್ದೇಶ್, ನಾಗರಾಜ್, ಮೈತ್ರಿ ಪ್ರಭಾಕರ್, ದೇವಿಕಾ, ಶೋಭ, ಕವಿತಾ, ಮಂಜುಳ, ಮಂಜುನಾಥ್, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Kshetra Samachara
03/12/2024 05:48 pm