ಚಿತ್ರದುರ್ಗ: ರಾಜ್ಯದಲ್ಲಿ ಸದ್ಯ ಸರ್ಕಾರಿ ಹಾಗೂ ರೈತರ ಖಾಸಗಿ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಅಂತಾ ನಮೂದಾಗಿರುವ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದು ಸದ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳ ಜಟಾಪಟಿಗೆ ಕೂಡ ಕಾರಣವಾಗಿದೆ.
ಆದ್ರೆ ಇತ್ತ ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ವಕ್ಫ್ ಗೆ ಸೇರಿದ ಸುನ್ನಿ ಖಬ್ರಸ್ತಾನವನ್ನು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ. ಅನ್ವರ್ ಬಾಷಾ ಅತಿಕ್ರಮಿಸಿ ಕಾಲೇಜು ಕಟ್ಟಡ ಕಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡ ಅಗಸನಕಲ್ಲು ಗ್ರಾಮದ ರಿ. ಸರ್ವೇ ನಂ 11 ರಲ್ಲಿ ಒಟ್ಟು 59 ಎಕರೆ ಸರಕಾರಿ ಖರಾಬು ಜಮೀನಲ್ಲಿ 6 ಎಕರೆ ಹಿಂದೂ ಸ್ಮಶಾನಕ್ಕೆ, 6 ಎಕರೆ ಜಾಗವನ್ನು ಸುನ್ನಿ ಖಬ್ರಸ್ತಾನ್ ಗೆ ಹಾಗೂ 4 ಎಕರೆ 6 ಗುಂಟೆ ಜಮೀರ್ ಎಂಬುವವರಿಗೆ ಸರಕಾರದಿಂದ ನೀಡಲಾಗಿದೆ. ಸದ್ಯ ಸುನ್ನಿ ಖಬ್ರಸ್ತಾನ್ ಗೆ ನೀಡಿದ ಜಮೀನನ್ನು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ. ಅನ್ವರ್ ಬಾಷಾ ಕಬಳಿಕೆ ಮಾಡಿ ಕಾಲೇಜು ಕಟ್ಟಡ ಕಟ್ಟಿದ್ದಾರೆ ಅನ್ನೋ ಆರೋಪವನ್ನು ಖುದ್ದು ಮುಸ್ಲಿಂ ಸಮುದಾಯದ ಮುಖಂಡರು ಮಾಡಿದ್ದಾರೆ.
ಇನ್ನು ಅನ್ವರ್ ಬಾಷಾ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ ವಕ್ಫ್ ಕಮಿಟಿ ಹಾಗೂ ಮುಸ್ಲಿಂ ಸಮುದಾಯದ ಕೆಲ ಮುಖಂಡರ ಜಟಾಪಟಿಗೆ ಕಾರಣವಾಗಿದೆ. ಅನ್ವರ್ ಪಾಷಾರ ಕಾಲೇಜು ಕಟ್ಟಡ ವಕ್ಫ್ ಬೋರ್ಡ್ ಜಾಗದಲ್ಲಿ ಇಲ್ಲ. ಸುನ್ನಿ ಖಬ್ರಸ್ತಾನ ಸರ್ವೇ ನಂ 24 ರಲ್ಲಿದ್ರೆ, ಅನ್ವರ್ ಪಾಷಾ ಕಾಲೇಜು ಸರ್ವೇ ನಂ 25 ರಲ್ಲಿದೆ. ಎರಡೂ ಸರ್ವೇ ನಂಬರ್ ಬೇರೆಯಾಗಿವೆ. ಈ ಮಧ್ಯೆ ಪಟೇಲ್ ಎಂಬವರಿಗೆ ಸೇರಿದ 4 ಎಕರೆ 6 ಗುಂಟೆ ಜಮೀನಿದೆ. ಹಾಗಾಗಿ ಅನ್ವರ್ ಬಾಷಾ ವಿರುದ್ಧ ರಾಜಕೀಯ ಪ್ರೇರಿತ ವಿನಾಕಾರಣ ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಸದ್ಯ ಕೋಟೆ ನಾಡಲ್ಲಿ ವಕ್ಫ್ ಆಸ್ತಿಯನ್ನು ವಕ್ಫ್ ಮಾಜಿ ಅಧ್ಯಕ್ಷರೇ ಕಬಳಿಸಿದ್ದಾರೆ ಎಂಬ ಆರೋಪ ಸಾಕಷ್ಟು ಸದ್ದು ಮಾಡ್ತಿದೆ. ಇನ್ನು ಖಬ್ರಸ್ತಾನ್ ಜಾಗ ಸರ್ವೆ ಆಗಬೇಕು ಅನ್ನೋದು ಮುಸ್ಲಿಂ ಸಮುದಾಯದ ಒತ್ತಾಯ ಕೂಡ.
PublicNext
30/11/2024 08:41 pm