ಬೆಂಗಳೂರು: 3 ಕ್ಷೇತ್ರಗಳ ಗೆಲುವು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಜನರು ಕೊಟ್ಟ ಲೈಸನ್ಸ್ ಅಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರು ತಿಳಿದುಕೊಳ್ಳಲಿ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್ಸಿಗರೆಲ್ಲರೂ ಈ ಸಾರಿ ಬಿಜೆಪಿಯನ್ನು ಬೆಂಬಲಿಸಿದ್ದು, ಅದರಿಂದ ನಾವು ಗೆದ್ದೆವು ಎಂದರೆ ಡಿ.ಕೆ.ಶಿವಕುಮಾರರು ಒಪ್ಪುತ್ತಾರಾ? ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ 3 ಲೋಕ-3 ರಾಜ್ಯಗಳನ್ನು ಗೆದ್ದಂತೆ ವಿಜೃಂಭಿಸುತ್ತಿದೆ. ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು, ಜೆಡಿಎಸ್- ಬಿಜೆಪಿ ನಾಯಕರು ತಮ್ಮನ್ನು ಬೆಂಬಲಿಸಿದ್ದಾಗಿ ಹೇಳಿದ್ದು, ಇದೊಂದು ಶುದ್ಧ ಸುಳ್ಳು ಮತ್ತು ದಾರಿ ತಪ್ಪಿಸುವ ಕೆಲಸ ಎಂದು ಖಂಡಿಸಿದರು.
ಸೋತಲ್ಲೆಲ್ಲ ಇವಿಎಂ ತಿರುಚಿದ್ದಾರೆ ಎನ್ನುವ ಕಾಂಗ್ರೆಸ್ಸಿಗರಿಗೆ ಇಲ್ಲಿ 3 ಸ್ಥಾನ ಗೆದ್ದ ಮೇಲೆ ಇವಿಎಂ ತಿರುಚಿಲ್ಲ ಎಂಬ ನಂಬಿಕೆ ಬಂದಿರಬಹುದು ಎಂದು ವ್ಯಂಗ್ಯವಾಡಿದರು. ಮಹಾರಾಷ್ಟ್ರದಲ್ಲಿ ಇವಿಎಂ ತಿರುಚಿದ್ದರೆ, ಜಾರ್ಖಂಡ್, ವಯನಾಡಿನಲ್ಲಿ ಬಿಜೆಪಿಯವರಿಗೆ ಯಾಕೆ ಇವಿಎಂ ತಿರುಚಲು ಸಾಧ್ಯವಾಗಿಲ್ಲ ಎಂದು ಕೇಳಿದರು.
ಕಾಂಗ್ರೆಸ್ಸಿನವರು ವಯನಾಡ್ ಬಿಟ್ಟು ಇನ್ಯಾವುದನ್ನೂ ಗೆಲ್ಲದಿದ್ದರೆ ಪರವಾಗಿಲ್ಲ ಎಂಬಂತೆ ಇದ್ದರು. ಅವರಿಗೆ ಆ ಕುಟುಂಬ ಮುಖ್ಯವೇ ಹೊರತು ಬೇರೆ ರಾಜಕಾರಣ ಪ್ರಮುಖವಲ್ಲ ಎಂದು ತೋರಿಸಿದ್ದಾರೆ ಎಂದರು.
PublicNext
25/11/2024 07:48 pm