ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಲುಷಿತಗೊಳ್ಳುವ ಜೊತೆಗೆ ಒತ್ತೂವರಿಯೂ ಆಗುತ್ತಿದೆ ಧಾರವಾಡದ ಕೆಲಗೇರಿ ಕೆರೆ

ಧಾರವಾಡ: ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ವಿನ್ಯಾಸಗೊಂಡಿರುವ ಧಾರವಾಡದ ಕೆಲಗೇರಿ ಕೆರೆಗೆ ತನ್ನದೇ ಆದ ಇತಿಹಾಸವಿದೆ. ಅಂದಾಜು 176 ಎಕರೆ ಬೃಹತ್ ವಿಸ್ತೀರ್ಣವನ್ನು ಈ ಕೆರೆ ಹೊಂದಿದೆ. ಆದರೆ, ಇತ್ತೀಚೆಗೆ ಈ ಕೆರೆ ಕಲುಷಿತಗೊಳ್ಳುವುದರ ಜೊತೆಗೆ ಕೆರೆಯ ಜಾಗ ಒತ್ತುವರಿ ಕೂಡ ಆಗುತ್ತಿದೆ.

ಬನ್ನಿ ಹಾಗಿದ್ರೆ ಇವತ್ತಿನ "ನಮ್ಮ ಊರು ನಮ್ಮ ಕೆರೆ" ಅಭಿಯಾನದಲ್ಲಿ ಧಾರವಾಡದ ಕೆಲಗೇರಿ ಕೆರೆಯ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ.

ಧಾರವಾಡದ ಈ ಕೆಲಗೇರಿ ಕೆರೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಂಬಾಡಿ ಕಟ್ಟಡವನ್ನು ವಿನ್ಯಾಸಗೊಳಿಸಿದ ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ಈ ಕೆರೆ ವಿನ್ಯಾಸಗೊಂಡಿದೆ. ಅಂದಾಜು 176 ಎಕರೆ ವಿಸ್ತೀರ್ಣದಲ್ಲಿ ಈ ಕೆರೆ ಇದ್ದು, ಡಾ.ದ.ರಾ.ಬೇಂದ್ರೆ ಕೂಡ ಈ ಕೆರೆಯ ಪಕ್ಕದ ಹೊಲದಲ್ಲಿ ಬಂದು ಕುಳಿತ ಕವಿತೆ ಬರೆಯುತ್ತಿದ್ದರು ಎಂಬ ಮಾತಿದೆ. ಆದರೆ, ಕೆಲಗೇರಿ ಕೆರೆ ತನ್ನ ಅಂದವನ್ನು ಈಗ ಕೆಡಿಸಿಕೊಂಡಿದೆ. ಈ ಕೆರೆಗೆ ಅನೇಕ ಕಡೆಗಳಿಂದ ನಗರದ ಚರಂಡಿ ನೀರು ಬಂದು ಮಿಶ್ರಣವಾಗುತ್ತಿದೆ. ಕೆರೆಯ ದಂಡೆಯ ಮೇಲೆ ಎಲ್ಲಿ ಬೇಕಾದಲ್ಲಿ ಮದ್ಯದ ಬಾಟಲಿಗಳು ಬೀಳುತ್ತಿವೆ. ತಿಂಗಳಿಗೊಮ್ಮೆಯಾದರೂ ಈ ಕೆರೆಯಲ್ಲಿ ಒಬ್ಬೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆರೆಯ ತುಂಬ ಅಂತರಗಂಗೆ ಬೆಳೆದು ನಿಲ್ಲುತ್ತಿದೆ. ಇದಕ್ಕೆ ಕಾರಣ ಕೆರೆ ಸರಿಯಾಗಿ ನಿರ್ವಹಣೆಯಾಗದೇ ಇರುವುದು ಹಾಗೂ ಕೆರೆಗೆ ಕಾವಲು ಕಾಯುವ ಸಿಬ್ಬಂದಿ ಇಲ್ಲದೇ ಇರುವುದು.

ವಾಸ್ತವವಾಗಿ ಈ ಕೆರೆಯ ನಿರ್ವಹಣೆ ಜವಾಬ್ದಾರಿಯನ್ನು ಕೃಷಿ ವಿಶ್ವವಿದ್ಯಾಲಯ ವಹಿಸಿಕೊಂಡಿದೆ. ಆದರೆ, ಕೆರೆ ನಿರ್ವಹಣೆ ಸರಿಯಾಗಿ ಆಗದೇ ಇರೋದ್ರಿಂದ ಒಬ್ಬರ ಮೇಲೆ ಒಬ್ಬರು ಎತ್ತಿ ಹಾಕುವ ಕೆಲಸ ಮಾಡಲಾಗುತ್ತಿದೆ. ಪಾಲಿಕೆ ಕೂಡ ಈ ಕೆರೆಯ ನಿರ್ವಹಣೆಯನ್ನು ಮಾಡದೇ ಇರುವುದರಿಂದ ಈ ಕೆರೆ ಕುಡುಕರ ಅಡ್ಡಯಾಗಿದೆ. ಚರಂಡಿ ನೀರು ಕೆರೆ ಸೇರುತ್ತಿದೆ. ಹೀಗಾಗಿ ಈ ಐತಿಹಾಸಿಕ ಕೆರೆ ತನ್ನ ಇತಿಹಾಸವನ್ನೇ ಕಳೆದುಕೊಳ್ಳುತ್ತಿದೆ.

ಒಟ್ಟು 176 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯ ಒಂದು ಕಡೆಯಿಂದ ಜಾಗ ಒತ್ತುವರಿಯಾಗುತ್ತಿದೆ. 176 ಎಕರೆ ಇದ್ದ ಕೆರೆಯ ಜಾಗ ಇದೀಗ ಅಷ್ಟು ಉಳಿದಿಲ್ಲ. ಪ್ರಭಾವಿಗಳು ಜಾಗ ಒತ್ತುವರಿ ಮಾಡುತ್ತಿದ್ದು, ಈ ಕೆರೆಯ ಜಾಗವನ್ನು ಸರ್ವೆ ಮಾಡಿಸಬೇಕು. ಕೆರೆಗೆ ಸೇರುತ್ತಿರುವ ಚರಂಡಿ ನೀರನ್ನು ತಡೆಗಟ್ಟಿ ಕೆರೆಯನ್ನು ಶುದ್ಧವಾಗಿಡಬೇಕು ಎಂಬ ಒತ್ತಾಯವನ್ನು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಮಾಡಿದ್ದಾರೆ.

ಕೆರೆಯ ಒಂದು ಭಾಗದಲ್ಲಿ ಶೆಡ್‌ಗಳು ಹಾಗೂ ಇತರೆ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 10-15 ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂದು ಕೆಲಗೇರಿ ನಿವಾಸಿಗಳೇ ಹೇಳುತ್ತಿದ್ದಾರೆ. ಒಟ್ಟಾರೆ ಐತಿಹಾಸಿಕ ಕೆಲಗೇರಿ ಕೆರೆ ಇದೀಗ ಒತ್ತುವರಿಯಾಗುತ್ತಿದ್ದು, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ಕೆರೆಯ ಸಂರಕ್ಷಣೆ ಮಾಡಬೇಕಿದೆ.

-ಇದು ನಮ್ಮ ಊರು ನಮ್ಮ ಕೆರೆ ವಿಶೇಷ, ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/11/2024 07:08 pm

Cinque Terre

32.88 K

Cinque Terre

0

ಸಂಬಂಧಿತ ಸುದ್ದಿ