ಸಾಗರ : ಮಂಗಳವಾರ ಸಾಗರಕ್ಕೆ ಭೇಟಿ ನೀಡುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೆಎಫ್‌ಡಿ ಮತ್ತು ಹಂದಿಗೋಡು ಕಾಯಿಲೆ ಕುರಿತು ಗಂಭೀರ ಗಮನ ಹರಿಸಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಜನರಿಗೆ ಶಾಪವಾಗಿರುವ ಮಂಗನಕಾಯಿಲೆ ಮತ್ತು ದಲಿತ ವರ್ಗಕ್ಕೆ ಕಂಟಕವಾಗಿರುವ ಹಂದಿಗೋಡು ಕಾಯಿಲೆ ಬಗ್ಗೆ ಯಾವ ಸರ್ಕಾರಗಳು ಸೂಕ್ತ ನಿಗಾವಹಿಸದೆ ಇರುವುದು ಬೇಸರದ ಸಂಗತಿ ಎಂದರು.
ಕಳೆದ ಮೂರು ವರ್ಷದ ಹಿಂದೆ ಮಂಗನಕಾಯಿಲೆಗೆ ತಾಲ್ಲೂಕಿನಲ್ಲಿ 23ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಪ್ರತಿವರ್ಷ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮಂಗನಕಾಯಿಲೆಗೆ ಈತನಕ ಸೂಕ್ತ ಔಷಧಿ ಕಂಡು ಹಿಡಿದಿಲ್ಲ. ದಕ್ಷಿಣ ಭಾರತ ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನಕಾಯಿಲೆ 400ರಿಂದ 500 ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ರಾಜ್ಯದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸರ್ಕಾರ ತಕ್ಷಣ ಮಂಗನ ಕಾಯಿಲೆ ವೈರಸ್ ಸಂಶೋಧನಾ ಕೇಂದ್ರವನ್ನು ಸಾಗರದಲ್ಲಿ ಸ್ಥಾಪಿಸಬೇಕು. ಇದಕ್ಕೆ ಸಂಬಂಧಪಟ್ಟ ಔಷಧಿಯನ್ನು ಮೊದಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಹಂದಿಗೋಡು ಸಿಂಡ್ರೋಮ್‌ಗೆ ಔಷಧಿಯನ್ನು ಈತನಕ ಕಂಡು ಹಿಡಿದಿಲ್ಲ. ಸುಮಾರು ಐವತ್ತು ವರ್ಷದಿಂದ ಈ ಕಾಯಿಲೆ ಮಲೆನಾಡಿನ ದಲಿತ ಕೇರಿಗಳಲ್ಲಿ ಕೃಷಿಕೂಲಿ ಮಾಡಿಕೊಂಡ ಕುಟುಂಬವನ್ನು ಬಾಧಿಸುತ್ತಿದೆ. ಈತನಕ ಅನೇಕ ಸಂಶೋಧನೆ ನಡೆದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ವರದಿಯ ಅಂಶ ಬಹಿರಂಗ ಪಡಿಸಿಲ್ಲ. ಹಂದಿಗೋಡು ಕಾಯಿಲೆ ಸಂತ್ರಸ್ತರು ತೀವೃ ಸಂಕಷ್ಟದಲ್ಲಿದ್ದು ಸರ್ಕಾರ ಅವರಿಗೆ ತಿಂಗಳಿಗೆ 5ಸಾವಿರ ರೂ. ಮಾಶಾಸನ ನೀಡಬೇಕು. ಹಂದಿಗೋಡು ಕಾಯಿಲೆ ಪೀಡಿತರ ಪುನರ್ ವಸತಿಗಾಗಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಆರೋಗ್ಯ ಸಚಿವರು ಕೆಎಫ್‌ಡಿ ಮತ್ತು ಮಂಗನ ಕಾಯಿಲೆ ಕುರಿತು ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆಯ ವಿಶೇಷ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್,ನಗರಸಭೆ ಮಾಜಿ ಸದಸ್ಯ ಸುಂದರಸಿಂಗ್, ಅರಣ್ಯಮೂಲ ಬುಡಕಟ್ಟು ಒಕ್ಕೂಟದ ರಾಜ್ಯ ಸಂಚಾಲಕ ರಾಮಣ್ಣ ಹಸಲರು, ರೈತ ಮುಖಂಡ ಯು.ಪಿ.ಜೋಸೆಫ್ ಹಾಜರಿದ್ದರು.
Kshetra Samachara
25/11/2024 03:18 pm