ಸಾಗರ: ಆರೋಗ್ಯವಂತರಾಗಿ ಇರಬೇಕೆಂದರೆ ಮೊದಲು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಆದರೆ ಈ ವಾರ್ಡಿನ ಸ್ಥಳೀಯರ ಗೋಳು ಕೇಳುವವರೇ ಯಾರೂ ಇಲ್ಲ.
ಹೌದು, ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ 25 ನೇ ವಾರ್ಡ್ ನಲ್ಲಿ ಬರುವ ಮುಸ್ಲಿಂ ಸಮುದಾಯದ ಖಬರ್ಸ್ತಾನ ಮುಂಭಾಗದ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಕೊಂಡಿದ್ದು ಗಬ್ಬು ನಾರುತ್ತಿದೆ. ಮನೆಗಳ ಸುತ್ತಲೂ ಇರುವ ಚರಂಡಿಗಳಲ್ಲಿ ಕೊಳಚೆ ನೀರು ಸರಿಯಾಗಿ ಹರಿಯದೇ ಒಂದೇ ಕಡೆ ನಿಂತಿದ್ದು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುವ ಸ್ಥಿತಿ ಉದ್ಭವವಾಗಿದೆ.
ವಿಪರ್ಯಾಸ ಅಂದರೆ ಈ ವ್ಯಾಪ್ತಿಗೆ ನಗರಸಭೆಯ ಮೂರು ಸದಸ್ಯರು ಸಂಬಂಧ ಪಟ್ಟರೂ ಸಹ ಇಲ್ಲಿಯವರೆಗೆ ಸ್ಥಳೀಯರ ಸಮಸ್ಯೆ ಸರಿಪಡಿಸಲು ಮುಂದಾಗಿಲ್ಲ. ಮಳೆಗಾಲದಲ್ಲಿ ಮಳೆ ಸುರೀತು ಅಂದರೆ ರಸ್ತೆಯ ನೀರು ಎಲ್ಲ ಮನೆಯ ಒಳಗೆ ತುಂಬಿ ಒಂದು ರೀತಿ ಈ ಸ್ಥಳ ಸಂಪೂರ್ಣ ಕೆರೆಯಾಗಿ ಪರಿವರ್ತನೆಗೊಳ್ಳುತ್ತೆ.
ಕಳೆದ 20 ವರ್ಷದಿಂದ ನಮಗೆ ಈ ಸಮಸ್ಯೆ ಇದೆ. ಆದರೆ ಇಲ್ಲಿಯವರೆಗೂ ಯಾರೂ ಕೂಡ ಇದಕ್ಕೆ ಸರಿಯಾದ ಪರಿಹಾರ ಕಂಡು ಹಿಡಿದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಬರುತ್ತಾರೆ. ಆದರೆ ಇಂಥ ಸಮಸ್ಯೆಗಳು ಇದ್ದ ಸಂದರ್ಭದಲ್ಲಿ ಬರುತ್ತಾರೆ ಹಾಗೆ ಹೋಗುತ್ತಾರೆ. ಸಮಸ್ಯೆ ಸರಿಪಡಿಸಿ ಕೊಡುವುದಿಲ್ಲ ಎಂದು ಸ್ಥಳೀಯರು ಸ್ಥಳೀಯ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಏನೇ ಆಗಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಾಗರ ನಗರಸಭೆಯ ಅಧಿಕಾರಿಗಳು, ಸ್ಥಳೀಯ ಸದಸ್ಯರುಗಳಾದ ಸಯ್ಯದ್ ಜಾಕೀರ್, ತಷರೀಫ್ ಇಬ್ರಾಹಿಂ ಹಾಗೂ ಉಷಾ ಗುರುಮೂರ್ತಿ ತಕ್ಷಣ ಸಮಸ್ಯೆ ಇರುವ ಈ ವಾರ್ಡಿಗೆ ಆಗಮಿಸಿ ಗಬ್ಬು ನಾರುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯವಾಗಿದೆ.
ಜಮೀಲ್ ಸಾಗರ್, ಪಬ್ಲಿಕ್ ನೆಕ್ಸ್ಟ್, ಸಾಗರ
PublicNext
25/11/2024 08:39 pm