ಹೆಬ್ರಿ: ಸೋಮವಾರ ಎನ್ ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ವಿಕ್ರಂ ಗೌಡ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ. ಕಾರ್ಯಾಚರಣೆ ವೇಳೆ ಎಎನ್‌ಎಫ್ ಪಡೆಯ ಮೇಲೆ ದಾಳಿ ಮಾಡಿದ್ದರಿಂದ ಪ್ರತಿದಾಳಿ ನಡೆಸಲಾಯಿತು ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.
ಈ ಪ್ರದೇಶದಲ್ಲಿ ಎರಡು-ಮೂರು ಮನೆಗಳಿದ್ದವು. ನಕ್ಸಲ್-ಪೊಲೀಸ್ ಮುಖಾಮುಖಿಯಾದರು. ಈ ವೇಳೆ ಶರಣಾಗತಿಗೆ ಸೂಚನೆ ನೀಡಿದರೂ ಅವರು ಕೇಳಲಿಲ್ಲ. ಒಮ್ಮೆಲೇ ದಾಳಿ ಆರಂಭಿಸಿದ್ದಾರೆ .ವಿಕ್ರಂ ಗೌಡ 09 ಎಂ.ಎಂ. ಕಾರ್ಬೈನ್ ಮೆಶಿನ್‌ಗನ್, ರಿವಾಲ್ವರ್, ಚಾಕು ಹೊಂದಿದ್ದ. ಅವರಿಂದಲೂ ಸಾಕಷ್ಟು ಸುತ್ತು ಗುಂಡಿನ ದಾಳಿ ನಡೆದಿದೆ. ಈ ಎನ್ ಕೌಂಟರ್ ಬಗ್ಗೆ ಯಾವುದೇ ಸಂಶಯ ಬೇಡ. ದಾಳಿಗೆ ಪ್ರತಿದಾಳಿ ನಡೆಸಿದ ಸಂದರ್ಭ ವಿಕ್ರಂ ಗೌಡ ಹತನಾಗಿದ್ದಾನೆ ಎಂದು ಮೊಹಂತಿ ತಿಳಿಸಿದರು.
20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಮೂರು ರಾಜ್ಯಗಳಿಗೆ ಸಿಂಹಸ್ವಪ್ನವಾಗಿದ್ದ ವಿಕ್ರಂ ಗೌಡ ವಿರುದ್ಧ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಸುಲಿಗೆ, ಬೆದರಿಕೆ ಮುಂತಾದ ಒಟ್ಟು 64 ಪ್ರಕರಣಗಳು ದಾಖಲಾಗಿದ್ದವು. ಉಡುಪಿ ಜಿಲ್ಲೆಯೊಂದರಲ್ಲೇ 34 ಪ್ರಕರಣಗಳು ದಾಖಲಾಗಿದ್ದು 2003ರಲ್ಲಿ ಕೊಲೆ ಯತ್ನದ ಬಗ್ಗೆ ಮೊದಲನೇ ಪ್ರಕರಣ ವರದಿಯಾಗಿತ್ತು ಎಂದು ಪ್ರಣಬ್ ಮೊಹಂತಿ ಹೇಳಿದರು.
PublicNext
21/11/2024 01:54 pm