ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ತಾನೊಬ್ಬನೇ ಸುರಂಗ ಕೊರೆದು ಭೂತಾಯಿ ಮಡಿಲು ಹಸಿರಾಗಿಸಿದ್ದಾರೆ ಜಾನ್ ಮೊಂತೆರೋ!

ಮಂಗಳೂರು: ಇವರು ಕಾಯಕವನ್ನೇ ಉಸಿರಾಗಿಸಿಕೊಂಡ ಕರ್ಮಯೋಗಿ. ಬೇಸಾಯ ಹಾಗೂ ಮನೆಯ ಖರ್ಚಿಗಾಗಿ ನೀರಿನ ಸಮಸ್ಯೆ ಎದುರಾದಾಗ ಇವರು ಕಂಡುಕೊಂಡ ಮಾರ್ಗವೇ ಸುರಂಗಗಳನ್ನು ಕೊರೆಯುವುದು. ಹೀಗೆ ಸುರಂಗ ಕೊರೆದು ಭೂಮಿತಾಯಿಯ ಒಡಲನ್ನು ಹಸಿರಾಗಿಸಿದ ಸರಳ ಸಜ್ಜನಿಕೆ ವ್ಯಕ್ತಿ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ, ಜಾನ್ ಮೊಂತೆರೋ.

ಹೌದು, ಜೋನ್ ಮೊಂತೇರೊ ಕಾಯಕವೇ ಕೈಲಾಸವಾಗಿಸಿದ ಛಲವಾದಿ. ಮುಪ್ಪಿನಲ್ಲೂ ದುಡಿಮೆ ಮಾಡುವುದರಲ್ಲಿ ಎತ್ತಿದ ಕೈ. ಕೃಷಿಯನ್ನೇ ಉಸಿರಾಗಿಸಿಕೊಂಡವರು. ಬಾಲ್ಯದ ಕಡು ಬಡತನದ ಸಮಯದಲ್ಲಿ ಕುಡಿಯಲು, ಇದ್ದ ಜಮೀನಿನಲ್ಲಿ ಕೃಷಿ ನಡೆಸಲು ಹಾಗೂ ಮನೆಯ ಖರ್ಚಿಗಾಗಿ ನೀರಿನ ಸಮಸ್ಯೆ ಎದುರಾದಾಗ ಕಂಗೆಡದೆ ಅವರು ಕಂಡುಕೊಂಡ ಮಾರ್ಗವೇ ಸುರಂಗಗಳನ್ನು ಕೊರೆಯುವುದು. ಯಾರದೇ ಸಹಾಯ ಇಲ್ಲದೆ ತಾನೇ ಸ್ವತ ಸುರಂಗ ಕೊರೆದು ಭೂಮಿ ತಾಯಿಯ ಮಡಿಲು ಹಸಿರಾಗಿಸಿದ್ದಾರೆ.

ದಿನವಿಡಿ ಕೂಲಿ ಕೆಲಕ್ಕೆ ತೆರಳಿ ಸಂಜೆ ಮನೆಗೆ ಬಂದ ಬಳಿಕ ಸುಮಾರು 6 ಗಂಟೆಯ ನಂತರ ಸುರಂಗ ಕೊರೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದರು. ತಡರಾತ್ರಿ 12 ಗಂಟೆಯ ವರೆಗೂ ಸುರಂಗ ಕೊರೆದ ದಿನಗಳಿವೆ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಕುಡಿಯಲು ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಯಾರಲ್ಲೂ ತನ್ನ ಸಮಸ್ಯೆ ಹೇಳಿಕೊಳ್ಳದ ಜಾನ್ ತಾನಾಗಿಯೇ ಪರಿಹಾರೋಪಾಯ ಕಂಡುಕೊಳ್ಳಲು ಮುಂದಾಗುತ್ತಾರೆ.

ತನ್ನ ಜಮೀನಿನ ಗುಡ್ಡದ ತಪ್ಪಲಿನಲ್ಲಿ ಸ್ವಂತ ಪರಿಕಲ್ಪನೆಯಂತೆ ಅಗೆಯಲು ಆರಂಭಿಸುತ್ತಾರೆ. ಸುಮಾರು 30 ಫೀಟ್ ಗೂ ಅಧಿಕ ತೋಡಿದ ಬಳಿಕವೂ ನೀರು ಸಿಗದೇ ಇದ್ದ ಸಂದರ್ಭದಲ್ಲಿ ಧೃತಿ ಗೆಡದೆ ತನ್ನ ಪ್ರಯತ್ನ ಮುಂದುವರೆಸುತ್ತಾರೆ. ಅದರ ಫಲವೇ ಇಂದು ಅವರ ಮುಖದಲ್ಲಿರುವ ಖುಷಿ. ನೀರಿನ ಸಮಸ್ಯೆ ಇದ್ದ ಸಂದರ್ಭದಲ್ಲಿ ಅನೇಕ ಬಾರಿ ಜಾಗ ತೊರೆಯುವ ಯೋಚನೆ ಮಾಡಿದ್ದರು. ಆದರೂ ನಿರ್ಧಾರ ತೆಗೆದುಕೊಳ್ಳದೆ ಛಲವನ್ನು ಮಾಡುತ್ತ ಸುರಂಗ ಕೊರೆದು ನೀರಿನ ಒರತೆ ಪಡೆದರು.

ಜಾನ್ ಅವರು ಒಟ್ಟು 8 ಸುರಂಗಗಳನ್ನು ಕೊರೆದಿದ್ದು, ಆ ಪೈಕಿ ಮೂರು ಸುರಂಗಗಳಲ್ಲಿ ನೀರು ಸಿಕ್ಕಿದೆ. ಆರಂಭದಲ್ಲಿ 2 ವರ್ಷ ತೆಗೆದುಕೊಂಡ ಬಳಿಕದ ಸುರಂಗಗಳನ್ನು ಕೊರೆಯುವ ಕೌಶಲ್ಯ ಕಲಿತುಕೊಂಡರು. ಆ ಬಳಿಕ ಕೆಲವು ತಿಂಗಳುಗಳಲ್ಲಿ ಸುರಂಗ ಕೊರೆದು ಪೂರ್ಣಗೊಳಿಸಿದ್ದಾರೆ. ತನ್ನ ಈ ಕಾರ್ಯಕ್ಕೆ ಪತ್ನಿ- ಮಕ್ಕಳು ಸಹಕರಿಸಿದ್ದು, ಶಾಲೆಗೆ ಹೋಗುವ ಮುನ್ನ ಹಾಗೂ ಶಾಲೆಯಿಂದ ಬಳಿಕ ಮಣ್ಣು ತೆಗೆಯಲು ನೆರವಾಗುತ್ತಿದ್ದರು ಎನ್ನುತ್ತಾರೆ ಜಾನ್.

Edited By : Shivu K
PublicNext

PublicNext

20/11/2024 08:59 pm

Cinque Terre

57.08 K

Cinque Terre

1

ಸಂಬಂಧಿತ ಸುದ್ದಿ