ಕಡಬ: ನಾಪತ್ತೆಯಾದ ಯುವಕನೋರ್ವನು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಶಂಕಿತ ಆರೋಪಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಬಂದರೂ, ಸ್ವೀಕರಿಸದ ಪೊಲೀಸರ ವಿರುದ್ಧ ಮನೆಯವರು ಠಾಣೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಳಿನೆಲೆ ಗ್ರಾಮದ ಮುಂಗ್ಲಿ ಮಜಲು ನಿವಾಸಿ ಸಂದೀಪ್ (29) ನಾಪತ್ತೆಯಾದ ಯುವಕ. ಮರ್ದಾಳ ಎಂಬಲ್ಲಿ ವಿನಯ ಎಂಬವರೊಂದಿಗೆ ಸಂದೀಪ್ ಶಾಮಿಯಾನ ಕೆಲಸ ಮಾಡಿಕೊಂಡಿದ್ದ. ನವೆಂಬರ್ 27ರಂದು ಸಂಜೆ 5.30ರ ಸುಮಾರಿಗೆ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಕಾರಿನಲ್ಲಿ ನೋಡಿದ್ದಾಗಿ ಶಾಮಿಯಾನ ಮಾಲಕ ವಿನಯ್ ಹೇಳಿದ್ದರು.
ಆ ಬಳಿಕ ವಾರಗಳಿಂದ ಹುಡುಕಾಡಿದರೂ ಸಂದೀಪ್ ಪತ್ತೆಯಾಗಿರಲಿಲ್ಲ. ಈ ಬಗ್ಗೆ ದೂರು ನೀಡಲು ಬಂದ ಸಂದೀಪ್ ತಾಯಿ ಸರೋಜರನ್ನೇ ಗದರಿಸಿದ್ದರು ಎಂದು ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿಸಲಾಗಿದೆ. ಆದ್ದರಿಂದ ಸಂದೀಪ್ ಮೃತದೇಹವಾಗಿ ಪತ್ತೆಯಾದ ಬಳಿಕ ಪೊಲೀಸ್ ಠಾಣೆಗೆ ಮನೆಯವರು ಆಗಮಿಸಿ ಭಾರೀ ಆಕ್ರೋಶ ವ್ಯಕ್ತಪಡಿಸಿದರು.
ಮೂರು ದಿನಗಳ ಬಳಿಕ ದೂರು ಸ್ವೀಕರಿಸಿದ ಕಡಬ ಪೊಲೀಸರು, ರವಿವಾರ ಪ್ರತೀಕ್‌ನನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯ ಬಳಿಕ ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ರಾಜಕೀಯ ಒತ್ತಡದ ಆರೋಪವೂ ಕೇಳಿ ಬಂದಿದೆ.
PublicNext
03/12/2024 07:46 am