ಧಾರವಾಡ: ಪ್ರಿಯಕರರ ಜೊತೆ ಸೇರಿ ಹೆತ್ತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಇಬ್ಬರು ತಾಯಂದಿರು ಸೇರಿ ಅವರ ಪ್ರಿಯಕರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹು-ಧಾ ಪೊಲೀಸರು ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಹಾಗೂ ಕಿಡ್ನ್ಯಾಪ್ ಮಾಡಿದ ನಾಲ್ವರನ್ನು ಜೈಲಿಗೆ ಅಟ್ಟಿದ್ದಾರೆ.
ಧಾರವಾಡದಲ್ಲಿ ನವೆಂಬರ್ 7ರಂದು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ 6 ಮಕ್ಕಳು ಮಿಸ್ಸಿಂಗ್ ಆಗಿದ್ದಾರೆ ಎಂಬ ಪ್ರಕರಣ ದಾಖಲಾಗಿತ್ತು. ಈ ಮಿಸ್ಸಿಂಗ್ ಪ್ರಕರಣದ ಬೆನ್ನುಹತ್ತಿದ ವಿದ್ಯಾಗಿರಿ ಠಾಣೆಯ ಇನ್ಸ್‌ಪೆಕ್ಟರ್ ಸಂಗಮೇಶ ದಿಂಡಿಗನಾಳ ಹಾಗೂ ಧಾರವಾಡ ಶಹರ ಠಾಣೆಯ ಇನ್ಸ್ಪೆಕ್ಟರ್ ನಾಗೇಶ್ ಕಾಡದೇವರಮಠ ಕಾರ್ಯಾಚರಣೆ ನಡೆಸಲು ಫೀಲ್ಡ್‌ಗೆ ಇಳಿದಿದ್ದಾರೆ. ಆಗ ಮಕ್ಕಳು ಹಾಗೂ ಆರೋಪಿಗಳು ಬೆಂಗಳೂರಿನಲ್ಲಿ ಇರುವ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿರುತ್ತಾರೆ.
ಆಗ್ಲೇ ಐನಾತಿ ತಾಯಂದಿರು ತಮ್ಮ ಪ್ರಿಯಕರರ ಜೊತೆ ಸೇರಿಕೊಂಡು ತಮ್ಮ ಗಂಡನ ಮನೆಯವರಿಗೆ ನಿಮ್ಮ ಮನೆಯ ಮಕ್ಕಳು ಬೇಕು ಅಂದ್ರೆ 10 ಲಕ್ಷ ಹಣವನ್ನು ಕೊಡಿ, ಇಲ್ಲವಾದ್ರೆ ನಿಮ್ಮ ಮಕ್ಕಳನ್ನು ನಾವು ಬೇರೆ ಕಡೆಗೆ ಕರೆದುಕೊಂಡು ಹೋಗ್ತೀವಿ ಅಂತಾ ಫೋನ್‌ನಲ್ಲಿ ಧಮ್ಕಿ ಹಾಕುತ್ತಾರೆ. ಅಷ್ಟರಲ್ಲಾಗಲೇ ಲವ್ವರ್‌ಗಳ ಜೊತೆ ಸೇರಿ ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ್ದ ತಾಯಂದಿರನ್ನು ಪೊಲೀಸರು ಬಂಧಿಸಿ ಧಾರವಾಡಕ್ಕೆ ಕರೆ ತಂದಿದ್ದಾರೆ. ಸದ್ಯ ಈ ಐನಾತಿಗಳ ಬಗ್ಗೆ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದು ಹೀಗೆ...
ಈ ಪೈಕಿ ರೇಶ್ಮಾ ಎಂಬ ಆರೋಪಿ ತನ್ನ ಹಳೆಯ ಲವ್ವರ್ ಜೊತೆ ಸಂಪರ್ಕ ಹೊಂದಿದ್ದಳು. ಪ್ರಿಯಾಂಕ ಎಂಬಾಕೆ ತನ್ನ ಗಂಡ ತೀರಿಕೊಂಡ ನಂತರ ಇನ್ನೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ನಾಲ್ವರು ಸೇರಿಕೊಂಡು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ಹಣ ಸಿಕ್ಕರೆ ಆ ಹಣವನ್ನು ತೆಗೆದುಕೊಂಡು, ಮಕ್ಕಳನ್ನು ಬಿಟ್ಟು ಬೇರೆ ರಾಜ್ಯಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ದರು ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಮಕ್ಕಳನ್ನು ಸುರಕ್ಷಿತವಾಗಿ ತಂದು ಪೋಷಕರ ಮಡಿಲಿಗೆ ಒಪ್ಪಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಮಕ್ಕಳ ತಂದೆ ದೀಪಕ್ ಧನ್ಯವಾದ ತಿಳಿಸಿದ್ದು ಹೀಗೆ.
ಒಟ್ಟಿನಲ್ಲಿ ತಮ್ಮ ಚಪಲಕ್ಕಾಗಿ ಹೆತ್ತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟ ತಾಯಂದಿರು ಹಾಗೂ ಮತ್ತು ಪ್ರಿಯತಮರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಅದರಂತೆ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಮಕ್ಕಳನ್ನು ಸುರಕ್ಷಿತವಾಗಿ ತಂದೆಯ ಸುಪರ್ದಿಗೆ ಸೇರಿಸಿದ್ದಾರೆ.
-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/11/2024 05:21 pm