ಬಜಪೆ :ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ತಮ್ಮ ಜವಾಬ್ದಾರಿಯನ್ನ ತಿಳಿಸುವ ಉದ್ದೇಶದಿಂದ ತಾವೇ ಸಸ್ಯಗಳನ್ನು ನೆಟ್ಟು ಅದರ ಪಾಲನೆ ಪೋಷಣೆಯನ್ನು ನಿರಂತರ ತಮ್ಮ ಅವಲೋಕನದೊಂದಿಗೆ ನಡೆಸುವುದರಿಂದ ಸಮುದಾಯದ ಜನರಲ್ಲೂ ಪರಿಸರ ಪ್ರಜ್ಞೆಯನ್ನು ಮೂಡಿಸಲು ಈ ಚಟುವಟಿಕೆ ಅನುಕೂಲವಾಗುತ್ತದೆ ಎಂದು ವನಸಿರಿ ಇಕೋ ಕ್ಲಬ್ ಸಂಚಾಲಕಿ ಶ್ರೀಮತಿ ರಮ್ಯಾ ಕೆ ಹೇಳಿದರು.
ಅವರು ವನಸಿರಿ ಇಕೋ ಕ್ಲಬ್ ಸಂಯೋಜಕತ್ವದಲ್ಲಿ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಇಲ್ಲಿ ವಿಭಿನ್ನವಾಗಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ಫೆರ್ನಾಂಡಿಸ್ ಅವರು ಮಾತನಾಡಿ ಹಣ್ಣನ್ನು ನೀಡುವ ಸಸ್ಯಗಳಿಂದ ಸಮುದಾಯಕ್ಕೂ ಭವಿಷ್ಯದಲ್ಲಿ ಉಪಯೋಗವಾಗುತ್ತದೆ ಎಂದರು.
ವನಸಿರಿ ಇಕೋ ಕ್ಲಬ್ ಸಂಯೋಜನೆಯಲ್ಲಿ ಸುಮಾರು 10 ವಿವಿಧ ತಳಿಗಳಾದ ಹಲಸು, ಮಾವು, ರಂಬುಟನ್, ಚೆರ್ರಿ, ಮಹಾಗನಿ ರೇಂಜೀರ್, ಜಾಮೂನ್, ಕಹಿಬೇವು ನೇರಳೆ ಸಸಿಗಳನ್ನು ವಿದ್ಯಾರ್ಥಿಗಳ ನಾಲ್ಕು ತಂಡಗಳಿಂದ ಶಾಲಾ ಪರಿಸರ ಹಾಗೂ ವಿದ್ಯಾರ್ಥಿಗಳು ತಾವು ದಿನನಿತ್ಯ ತೆರಳುವ ದಾರಿಯ ಬದಿಗಳಲ್ಲಿ ನೆಡಲಾಯಿತು.ಮತ್ತು ಅದನ್ನು ಮೂರು ವರ್ಷಗಳ ಕಾಲ ಪೋಷಿಸಿ ಅವರು 10ನೇ ತರಗತಿಯಲ್ಲಿ ಪ್ರವೇಶಿಸುವಾಗ ಗಿಡದ ಬೆಳವಣಿಗೆ ಹಾಗೂ ಪ್ರಸ್ತುತ ಸ್ಥಿತಿಗತಿಗಳನ್ನು ಆದರಿಸಿ ವಿದ್ಯಾರ್ಥಿಗಳಿಗೆ ಗ್ರೇಡ್ ಗಳನ್ನು ನೀಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಿಯೋಜಿತ ಕಾರ್ಯಕ್ಕೆ ಸಂಬಂಧಿಸಿದ ಹಣ್ಣಿನ ಸಸಿಗಳನ್ನು ಕೃಷಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ಫೆರ್ನಾಂಡಿಸ್ ಉಚಿತವಾಗಿ ವಿತರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್ ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅಮೀನ್,ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ, ಚಿತ್ರ ಶ್ರೀ, ಶ್ರೀಮತಿ ವಿನ್ನಿ ನಿರ್ಮಲ ಡಿಸೋಜ, ವಿದ್ಯಾಲತಾ, ವಿದ್ಯಾ ಗೌರಿ,ಜಯಂತಿ ಉಪಸ್ಥಿತರಿದ್ದರು.
Kshetra Samachara
14/11/2024 05:03 pm