ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕಾಗಿ ನಡೆದ ಜಗಳದಲ್ಲಿ ವೃದ್ದನಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದ ಆರೋಪಿಯನ್ನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ (39) ಬಂಧಿತ ಆರೋಪಿ.
ನಾಗರಭಾವಿಯ ವಿನಾಯಕ್ ನಗರದಲ್ಲಿ ವಾಸವಾಗಿದ್ದು ಕಾರು ಚಾಲಕನಾಗಿದ್ದ. ಹಲ್ಲೆಗೊಳಗಾಗಿರುವ ವಿ.ದಳಪತಿ (70) ಅವರು ಖಾಸಗಿ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ದಳಪತಿ ಮನೆಯವರು ನೀಡಿದ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ. ವಿಚಾರಣೆ ಮುಗಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದಳಪತಿ ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ನಾಗರಭಾವಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ. ಕಾರು ಪಾರ್ಕಿಂಗ್ ವಿಚಾರಕ್ಕಾಗಿ ನಿನ್ನೆ ಮಧ್ಯಾಹ್ನ ರಾಘವೇಂದ್ರ ಇವರ ಮನೆ ಬಳಿ ಬಂದಿದ್ದ. ಮನೆಯಲ್ಲಿ ದಳಪತಿ ಸೊಸೆಯೊಂದಿಗೆ ಕ್ಯಾತೆ ತೆಗೆದಿದ್ದ. ಈ ವೇಳೆ ಕೆಲಸ ಮುಗಿಸಿ ದಳಪತಿ ಅವರು ಮನೆ ಬಳಿ ಬಂದಾಗ ಗಲಾಟೆಯಾಗುತ್ತಿರುವುದನ್ನ ಕಂಡು ಆರೋಪಿಗೆ ಪ್ರಶ್ನಿಸಿದ್ದಾರೆ. ಇಬ್ವರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅಡುಗೆ ಮನೆಯಲ್ಲಿದ್ದ ಚಾಕುವನ್ನ ಸೊಸೆ ಮಾವನಿಗೆ ನೀಡಿದ್ದರು ಎನ್ನಲಾಗಿದೆ.
ಈ ವೇಳೆ ಆರೋಪಿಯು ಚಾಕು ಕಸಿದುಕೊಂಡು ದಳಪತಿ ಅವರ ಬೆನ್ನಿಗೆ ಚುಚ್ಚಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ದಳಪತಿ ಅವರನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
PublicNext
14/11/2024 02:14 pm