ಬೆಂಗಳೂರು : ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ)ನ 402 ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಅ. 3ರಂದು ನಡೆದ ಲಿಖಿತ ಪರೀಕ್ಷೆಯಲ್ಲಿ (ಪತ್ರಿಕೆ - 1 ಮತ್ತು 2) ಅಭ್ಯರ್ಥಿಗಳು ಅಂತಿಮವಾಗಿ ಪಡೆದ ಅಂಕಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಸದರಿ ಪಟ್ಟಿಯನ್ನು ನೇಮಕಾತಿ ವಿಭಾಗದ ಪೊಲೀಸ್ ಮಹಾನಿರ್ದೇಶಕರಿಗೆ ಹಸ್ತಾಂತರಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ವ್ಯತ್ಯಾಸ ಇಲ್ಲ:
ತಾತ್ಕಾಲಿಕ ಅಂಕಪಟ್ಟಿಗೆ ಬಂದ ಎಲ್ಲ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಈಗಾಗಲೇ ಅಭ್ಯರ್ಥಿಗಳು ಪಡೆದಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪತ್ರಿಕೆ-1ಕ್ಕೆ 313 ಹಾಗೂ ಪತ್ರಿಕೆ-2ಕ್ಕೆ 219 ಆಕ್ಷೇಪಣೆಗಳು ಸ್ವೀಕೃತವಾಗಿದ್ದವು.
ಪತ್ರಿಕೆ-1ರ ಉತ್ತರ ಪತ್ರಿಕೆಗಳನ್ನು ನಿಯಮ ಪ್ರಕಾರ ಒಂದು ಮತ್ತು ಎರಡನೇ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ಈ ಎರಡೂ ಮೌಲ್ಯಮಾಪನ ಸಂದರ್ಭದಲ್ಲಿ 8 ಅಥವಾ 8ಕ್ಕಿಂತ ಹೆಚ್ಚಿನ ಅಂಕಗಳ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು 3ನೇ ಮೌಲ್ಯಮಾಪನ ಮಾಡಿಸಲಾಗಿದೆ. ಆಕ್ಷೇಪಣೆ ಬಂದ ಮೇಲೆ ಇವುಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದು (ಮರು ಎಣಿಕೆ), ಈಗಾಗಲೇ ಈ ಅಭ್ಯರ್ಥಿಗಳು ಪಡೆದಿರುವುದಾಗಿ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ.
ಹಾಗೆಯೇ ಪತ್ರಿಕೆ-2ರ ಒ.ಎಂ.ಆರ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ್ದು, ಅಲ್ಲಿಯೂ ವ್ಯತ್ಯಾಸ ಕಂಡುಬಂದಿಲ್ಲ. ಹೀಗಾಗಿ ಈ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶ ಇರುವುದಿಲ್ಲವೆಂದು ತೀರ್ಮಾನಿಸಲಾಗಿದೆ ಎಂದು ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.
Kshetra Samachara
14/11/2024 09:45 pm