ಬೆಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆ ಮತ್ತು ಜೀವಜಲದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನೀರಿನ ಬಿಲ್ ನಲ್ಲಿ ತಿಂಗಳಿಗೆ 2 ಅಥವಾ 3 ರೂ. ಹಸಿರು ಸೆಸ್ ಹಾಕಲು ಪ್ರಸ್ತಾವ ಮಂಡಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಬಳಸುವ ನೀರಿಗೆ ತಿಂಗಳಿಗೆ 2-3 ರೂ. ಸೆಸ್ ಹಾಕಿದರೆ ಒಂದು ಕುಟುಂಬಕ್ಕೆ ದಿನವೊಂದಕ್ಕೆ ಸರಾಸರಿ 10 ಪೈಸೆ ಅಷ್ಟೇ ಸೆಸ್ ಹಾಕಿದಂತಾಗುತ್ತದೆ. ಇದು ಹೊರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಸುಸ್ಥಿರ ಶುದ್ಧ ಕುಡಿಯುವ ನೀರಿಗಾಗಿ ಪಶ್ಚಿಮಘಟ್ಟ ಸಂರಕ್ಷಣೆ ಅಗತ್ಯ. ಸೆಸ್ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾದಾಗ ಪಶ್ಚಿಮಘಟ್ಟ ಮತ್ತು ನೀರಿನ ಹಿತಮಿತ ಬಳಕೆಯ ಜಾಗೃತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಸೆಸ್ ವಿಧಿಸುವ ಚಿಂತನೆ ಮೂಡಿದೆ. ಈ ಬಗ್ಗೆ ಚರ್ಚೆ ಆಗಲಿ. ಜನಾಭಿಪ್ರಾಯ ಪಡೆದು, ಅದರ ಆಧಾರದ ಮೇಲೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಹಣವನ್ನು ಪಶ್ಚಿಮಘಟ್ಟ ಸಂರಕ್ಷಣೆಗೆ, ವೃಕ್ಷ ಸಂವರ್ಧನೆಗೆ ಬಳಸಲಾಗುವುದೇ ಹೊರತು ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ. ಒಂದು ವೇಳೆ ಸೆಸ್ ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರೆ ಪ್ರಸ್ತಾಪ ಕೈಬಿಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
PublicNext
14/11/2024 08:08 pm