ಬೆಂಗಳೂರು : ಶಾಸಕರಿಗೆ ಬಿಜೆಪಿ 50 ಕೋಟಿ ಆಫರ್ ಮಾಡಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಉಪ ಚುನಾವಣೆಯ ಫಲಿತಾಂಶ ಬರುವುದಕ್ಕಿಂತ ಮುಂಚೆಯೇ ಸೋಲಿನ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ತನ್ನ ಸ್ಥಾನಕ್ಕೆ ಚ್ಯುತಿ ಬರುವ ಭಾವನೆಯನ್ನು ಕಣ್ಮುಂದೆ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಮ್ಮ ಶಾಸಕರನ್ನು ಬಿಜೆಪಿಯವರು ಖರೀದಿಸುತ್ತಿದ್ದಾರೆ’ ಎಂಬ ಹುಸಿ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಬೆಳವಣಿಗೆಗಳು, ನಾಯಕರ ಒಳ ಸಭೆಗಳು ಮುಖ್ಯಮಂತ್ರಿಗಳ ಕುರ್ಚಿಗೆ ಆಪತ್ತು ತರುತ್ತದೆ ಎಂದು ಅನಿಸುವುದಾಗಿ ಹೇಳಿದರು. ಬೆಳಗಾವಿಯ ಅಧಿವೇಶನ ಹೊಸ ಮುಖ್ಯಮಂತ್ರಿಯೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಬದಲಿಸಲಿದೆ ಎಂಬಂಥ ಬೆಳವಣಿಗೆ ನಡೆಯುತ್ತಿರುವಂತಿದೆ ಎಂದರು.
ಮುಖ್ಯಮಂತ್ರಿಯವರು ಇಲ್ಲಿ ತನಕ ತನ್ನ ಅಧಿಕಾರಾವಧಿಯಲ್ಲಿ ನೂರು ಸುಳ್ಳು ಹೇಳಿದ್ದು, ಇದು ನೂರ ಒಂದನೇ ಸುಳ್ಳು ಎಂದು ಅಂದುಕೊಳ್ಳುವುದಾಗಿ ತಿಳಿಸಿದರು. ಆಡಳಿತ ಪಕ್ಷವನ್ನು ಬೆದರಿಸಲು ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಆಡಳಿತ ಪಕ್ಷದ ಶಾಸಕರು, ಹೈಕಮಾಂಡನ್ನು ಹೆದರಿಸುವ ಪ್ರಯತ್ನ ಮುಖ್ಯಮಂತ್ರಿಯವರ ಈ ಹೇಳಿಕೆ ಹಿಂದಿದೆ ಎಂದು ಅವರು ವಿಶ್ಲೇಷಿಸಿದರು.
PublicNext
14/11/2024 08:02 pm