ಹುಬ್ಬಳ್ಳಿ-ಧಾರವಾಡ ನಾಗರಿಕರ ಜೀವ ಹಿಂಡುತ್ತಿದ್ದ, ಪಾಲಿಕೆಗೆ ದೊಡ್ಡ ತಲೆನೋವಾಗಿದ್ದ 5 ದಶಕಗಳ ಕಸದ ಬೆಟ್ಟ ಕರಗಿಸುವ 'ಬಯೋ ಮೈನಿಂಗ್' ಕೊನೆಗೂ ಶುರುವಾಗಿದೆ. ಪೂರ್ಣಬೆಟ್ಟ ಕರಗಲು, ಬರೋಬ್ಬರಿ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ- ಧಾರವಾಡ ಹಾಗೂ ಮೈಸೂರು ಪಾಲಿಕೆಗಳಲ್ಲಿ ಏಕಕಾಲಕ್ಕೆ ಬಯೋ ಮೈನಿಂಗ್ ಪ್ರಾರಂಭವಾಗಿದೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸಂಗ್ರಹವಾಗುತ್ತಿದ್ದ ಕಸದ ರಾಶಿ ಅಕ್ಷರಶಃ ಬೆಟ್ಟದಂತೆ ಬೆಳೆದಿದೆ. ಹುಬ್ಬಳ್ಳಿಯಲ್ಲಿ ಕಾರವಾರ ರಸ್ತೆಯಲ್ಲಿನ ಬರೋಬ್ಬರಿ 19 ಎಕರೆ ಪ್ರದೇಶದಲ್ಲಿ ಕಸದ ಬೆಟ್ಟ ಬೆಳೆದಿದ್ದರೆ, ಧಾರವಾಡದಲ್ಲಿ ಹೊಸ ಯಲ್ಲಾಪುರದಲ್ಲಿನ 16 ಎಕರೆ ಪ್ರದೇಶದಲ್ಲಿ ಕಸದ ಬೆಟ್ಟ ತಲೆ ಎತ್ತಿದೆ. ಇದರಿಂದ ಆಗುತ್ತಿದ್ದ ಸಮಸ್ಯೆ ಅಷ್ಟಿಷ್ಟಲ್ಲ.
ಪ್ರತಿದಿನ ಕಸದ ಬೆಟ್ಟದೊಳಗೆ ಬೆಂಕಿ ಹತ್ತುತ್ತಿತ್ತು. ಬೆಂಕಿಯ ದಟ್ಟ ಹೊಗೆ, ಸತ್ತ ನಾಯಿ, ಹಂದಿ, ದನಗಳ ದುರ್ನಾತ ಜನರನ್ನು ಸಾಕು ಸಾಕು ಮಾಡಿತ್ತು. ಪರಿಸರ ಸಂಪೂರ್ಣ ಹದಗೆಟ್ಟು ಸುತ್ತಮುತ್ತಲು 2-3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದುರ್ನಾತ ಬೀರುತ್ತಿತ್ತು. ಅಕ್ಷರಶಃ ಸಾಂಕ್ರಾಮಿಕ ರೋಗಗಳ ತಾಣವಾಗಿತ್ತು ಈ ಕಸದ ಬೆಟ್ಟ, ಇದಕ್ಕಾಗಿ ಸಾಕಷ್ಟು ಪ್ರತಿಭಟನೆಗಳೆಲ್ಲ ನಡೆದಿದ್ದವು. ಈ ಕಸದ ಬೆಟ್ಟ ಕರಗಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ 2017ರಲ್ಲೇ ಸೂಚನೆ ಕೂಡ ನೀಡಿದ್ದುಂಟು.
2021ರಲ್ಲಿ ಡಿಪಿಆರ್ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ಕಳುಹಿಸಿತ್ತು. ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು 2023ರಲ್ಲಿ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು 2024ರ ಏಪ್ರಿಲ್. ಮಳೆಗಾಲ ಇದ್ದಿದ್ದರಿಂದ ಕೆಲಸ ಶುರುವಾಗಿರಲಿಲ್ಲ. ಈಗ ಹದಿನೈದು ದಿನಗಳ ಹಿಂದೆಯಷ್ಟೇ ಅಂದರೆ ಅಕ್ಟೋಬರ್ 15ರಿಂದ ಈಚೆಗೆ ಕೆಲಸ ಶುರುವಾಗಿದೆ. ಬಯೋ ಮೈನಿಂಗ್ ಮೂಲಕ ಕಸದ ರಾಶಿಯನ್ನು ಸ್ಪಾ ಬೇಜ್ ಮಾಡಲಾಗುತ್ತಿದೆ. ಬಳಿಕ ಅದರಲ್ಲಿನ ಬಯೋ ಅರ್ಥ್ ಅಥವಾ ಬಯೋ ಸ್ವಾಯಿಲ್ (ಮಣ್ಣು) ಅನ್ನು ಗಾರ್ಡನ್ ಸೇರಿದಂತೆ ವಿವಿಧೆಡೆ ಉಪಯೋಗಿಸಬಹುದಾಗಿದೆ.
ಬಳಿಕ ಆರ್‌ಡಿಎಫ್ (ರಿಪ್ಯೂಸ್ ಡಿರೈವ್ ಫ್ಯುಯಲ್) ರಟ್ಟು, ಕಾಗದ, ಚಪ್ಪಲಿ, ಟೈರ್ ಸೇರಿದಂತೆ ಮತ್ತಿತರ ವಸ್ತುಗಳು ಬೇರ್ಪಟ್ಟು ಬಂದಿರುವ ರಾಶಿಯನ್ನು ಸಿಮೆಂಟ್ ಫ್ಯಾಕ್ಟರಿ ಸೇರಿದಂತೆ ಮತ್ತಿತರೆಡೆ ಉರುವಲು ಗಳಂತೆ ಬಳಸಬಹುದಾಗಿದೆ. ಮತ್ತೊಂದು ಇನರ್ಟ್ ಎಂಬ ವಸ್ತು ಬರುತ್ತದೆ. ಇದು ಯಾವುದಕ್ಕೂ ಉಪ ಯೋಗಕ್ಕೆ ಬಾರದ ವಸ್ತು. ಇದನ್ನು ಬರೀ ಕ್ವಾರಿ ಸೇರಿದಂತೆ ತಗ್ಗುಗಳನ್ನು ತುಂಬಲು ಮಾತ್ರ ಬಳಸಬಹುದಾಗಿದೆ. ಇದೀಗ ಈ ಪ್ರಕ್ರಿಯೆ ಇದೀಗಷ್ಟೇ ಪ್ರಾರಂಭವಾಗಿದೆ.
Kshetra Samachara
12/11/2024 05:14 pm