ನವಲಗುಂದ: ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿ ರೋಗದಿಂದ ರಾಜ್ಯವನ್ನು ಮುಕ್ತ ಮಾಡುವಲ್ಲಿ ಸಹಕರಿಸಿ ಎಂದು ಬೆಂಗಳೂರು ಪಶುಪಾಲನಾ ಇಲಾಖೆ ಅಪರ ನಿರ್ದೇಶಕ ಡಾ.ಪಿ ಶ್ರೀನಿವಾಸರವರು ಜಾನುವಾರು ಮಾಲಕರಿಗೆ ತಿಳಿಸಿದರು.
ತಾಲ್ಲೂಕಿನ ಶಿರೂರ ಹಾಗೂ ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಅವರು ಗ್ರಾಮಗಳ ಜಾನುವಾರು ಮಾಲೀಕರೊಂದಿಗೆ ಚರ್ಚಿಸಿ ಲಸಿಕೆ ಪರೀಶೀಲಿಸಿ ಕಾಲುಬಾಯಿ ರೋಗ ಒಂದು ಸಾಂಕ್ರಾಮಿಕ ಮತ್ತು ಕೆಲವೊಮ್ಮೆ ಮಾರಣಾಂತಿಕ ವೈರಲ್ ಕಾಯಿಲೆಯಾಗಿದ್ದು, ಇದು ದೇಶೀಯ ಹಸುಗಳು ಒಳಗೊಂಡಂತೆ ಸೀಳು-ಗೊರಸುಳ್ಳ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ವೈರಸ್ ಎರಡರಿಂದ ಆರು ದಿನಗಳ ಕಾಲ ತೀವ್ರವಾದ ಜ್ವರವನ್ನು ಉಂಟುಮಾಡುತ್ತದೆ. ನಂತರ ಬಾಯಿಯೊಳಗೆ ಮತ್ತು ಗೊರಸಿನ ಬಳಿ ಗುಳ್ಳೆಗಳು ಛಿದ್ರವಾಗಬಹುದು ಮತ್ತು ಕುಂಟತನವನ್ನು ಉಂಟುಮಾಡಬಹುದು. ಕೊನೆಗೆ ಜೀವವನ್ನೂ ಕಳೆಯಬಹುದು.
ಕೆಲ ವರ್ಷದ ಹಿಂದೆ ಕಾಲು ಬಾಯಿ ರೋಗಕ್ಕೆ ಸಹಸ್ರಾರು ಹಸುಗಳು ಕರ್ನಾಟಕದಲ್ಲಿ ಮೃತಪಟ್ಟಿದ್ದವು. ಭಾರತದ ಹಲವು ರಾಜ್ಯಗಳಲ್ಲೂ ಈ ಸಮಸ್ಯೆಯಿದೆ. ಈ ಕಾರಣದಿಂದ ಭಾರತ ಸರ್ಕಾರವು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಶುಪಾಲನಾ ಇಲಾಖೆಯಿಂದ ಆ.21 ರಿಂದ ನ.10 ರವರಿಗೆ ರಾಜ್ಯದ್ಯಂತ ನಡೆಯುತ್ತಿರುವ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡುತ್ತಿದೆ. ಆರು ತಿಂಗಳ ಹಿಂದೆ ಐದನೇ ಸುತ್ತಿನ ಲಸಿಕಾ ಕಾರ್ಯಕ್ರಮ ಆಗಿತ್ತು. ಈಗ ಆರನೇ ಹಂತದ ಚಟುವಟಿಕೆ ಶುರುವಾಗಿದೆ.
ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗೆ ಬಂದಾಗ ಸಹಕಾರ ನೀಡಿ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸಬೇಕು. ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆನೀಡುವುದು ಅತ್ಯಗತ್ಯವಾಗಿದೆ. ಈ ರೋಗದ ವಿರುದ್ಧ ಪ್ರತೀ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬರದಂತೆ ತಡೆಯಬೇಕಿದೆ ಎನ್ನುವುದು ಜಾನುವಾರು ಮಾಲೀಕರಿಗೆ ಅಧಿಕಾರಿಗಳ ಮನವಿಯಾಗಿದೆ ಎಂದರು.
Kshetra Samachara
06/11/2024 01:23 pm