ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳಿಗೆ ಈ ಎಲ್ ಆ್ಯಂಡ್ ಟಿ ಕಂಪೆನಿ ನೀರು ಸರಬರಾಜು ಮಾಡುವ ಜವಾಬ್ದಾರಿ ಹೊತ್ತುಕೊಂಡಾಗಿನಿಂದ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಲೇ ಇವೆ. ಸಾಮಾನ್ಯವಾಗಿ ನೀರಿನ ಪೈಪ್ ಒಡೆದಾಗ ಅದರಲ್ಲಿ ಕಲುಷಿತ ನೀರು ಮಿಶ್ರಣವಾಗಿ ಕುಡಿಯಲು ಕಲುಷಿತ ನೀರು ಪೂರೈಕೆಯಾಗುವುದು ಸಾಮಾನ್ಯ. ಆದರೆ, ಅವಳಿನಗರಕ್ಕೆ ತಿಂಗಳಾನುಗಟ್ಟಲೇ ಕಲುಷಿತ ನೀರು ಕುಡಿಯಲು ಪೂರೈಕೆಯಾಗುತ್ತಿರುವುದರಿಂದ ಜನತೆ ಸಾಂಕ್ರಮಿಕ ರೋಗದ ಭೀತಿ ಎದುರಿಸುವಂತಾಗಿದೆ.
ಹೌದು! ಹುಬ್ಬಳ್ಳಿ, ಧಾರವಾಡ ಅವಳಿನಗರಕ್ಕೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ನೀರು ಶುದ್ಧೀಕರಣ ಘಟಕದಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ, ಇತ್ತೀಚಿಗೆ ಅವಳಿನಗರಕ್ಕೆ ಕಲುಷಿತ ನೀರು ಕುಡಿಯಲು ಪೂರೈಕೆಯಾಗುತ್ತಿರುವುದರಿಂದ ಜನ ರೋಗದ ಭೀತಿ ಎದುರಿಸುವಂತಾಗಿದೆ. ಇದನ್ನೆಲ್ಲ ನೋಡಿದರೆ ನೀರು ಶುದ್ಧೀಕರಣವಾಗಿ ಬರುತ್ತಿದೆಯೋ ಅಥವಾ ನೇರವಾಗಿ ಮನೆ, ಮನೆಗಳಿಗೆ ಬರುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ. ಅಮ್ಮಿನಬಾವಿ ನೀರು ಶುದ್ಧೀಕರಣ ಘಟಕವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲೂ ಎಲ್ ಆ್ಯಂಡ್ ಟಿ ಗೆ ಆಗದೇ ಇರುವುದು ವಿಪರ್ಯಾಸ.
ಕಳೆದ ಕೆಲ ತಿಂಗಳುಗಳಿಂದ ಅವಳಿನಗರದ ಜನತೆ ಈ ಕಲುಷಿತ ನೀರನ್ನೇ ಕುಡಿಯುತ್ತಿರುವುದರಿಂದ ವಯಸ್ಸಾದವರು ಮತ್ತು ಚಿಕ್ಕಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಾಂತಿ-ಬೇಧಿಯಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಮಹಾನಗರ ಪಾಲಿಕೆ ಈ ಸಮಸ್ಯೆಯತ್ತ ಕೂಡಲೇ ಗಮನಹರಿಸಬೇಕಿದೆ. ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 50 ಜನ ಅಸ್ವಸ್ಥಗೊಂಡ ಘಟನೆ ಕಣ್ಮುಂದೆಯೇ ಇರುವಾಗ ಮಹಾನಗರ ಪಾಲಿಕೆ ಇದನ್ನು ನೋಡಿಯಾದರೂ ಅವಳಿನಗರಕ್ಕೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕಿದೆ.
Kshetra Samachara
29/10/2024 05:18 pm