ಕುಂದಗೋಳ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ್ 9ರಂದು ಸುವರ್ಣ ವಿಧಾನಸೌಧಕ್ಕೆ ಹೋಗುವ ಮಾರ್ಗವನ್ನೂ ಬಂದ್ ಮಾಡಿ ಮೀಸಲಾತಿ ಕೇಳೋಣ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕುಂದಗೋಳದಲ್ಲಿ ಹೇಳಿದರು.
ಅವರು ಕುಂದಗೋಳ ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನವರ 200ನೇ ಜಯಂತ್ಯುತ್ಸವ, ವಿಜಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಬಿಜೆಪಿ ಸರ್ಕಾರ ಇದ್ದಾಗ ಹಕ್ಕೊತ್ತಾಯ ಮಾಡಿದ್ದೇವೆ. ಈ ಬಾರಿ ಕಾಂಗ್ರೆಸ್ ಸರ್ಕಾರವಿದೆ.
ಕಿತ್ತೂರಿನಿಂದ ಸುವರ್ಣ ವಿಧಾನಸೌಧ ತಲುಪುವ ಮಾರ್ಗದಲ್ಲಿ ರೈತಾಪಿ ಜನರ ಟ್ರ್ಯಾಕ್ಟರ್ ನಿಲ್ಲಿಸಿ ಜನಪ್ರತಿನಿಧಿಗಳನ್ನು ತಡೆದು ಮೀಸಲಾತಿ ಕೇಳೋಣ ಎಂದರು.
ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನಮ್ಮ ಅವರ ಸಾಧನೆಯನ್ನು ಶ್ರೀಗಳು ಸ್ಮರಿಸಿದರು. ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ಸಮ್ಮುಖದಲ್ಲಿ ವೀರರಾಣಿ ಚೆನ್ನಮ್ಮನವರ ಪೋಟೋಗೆ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಸ್ವಾಮೀಜಿ, ವಿವಿಧ ರಾಜಕೀಯ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಬಳಿಕ ಗಣ್ಯರಿಗೆ, ರಾಜಕೀಯ ಪ್ರತಿನಿಧಿಗಳು, ಸಮಾಜ ಸೇವಕರಿಗೆ ಶ್ರೀಗಳು ಸನ್ಮಾನ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದರು.
ಬಳಿಕ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ನೂತನ ಮೂರ್ತಿಗಳಿಗೆ ಪುಷ್ಪ ಸಮರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ, ಕುರುಬ ಸಮಾಜದ ಮುಖಂಡರು, ಯುವಜನರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ರೈತ ಗೀತೆಗೆ ಗೌರವ ಕೊಡುವ ಮೂಲಕ ಆರಂಭಿಸಲಾಯಿತು.
Kshetra Samachara
26/10/2024 09:38 pm