ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ತಾಯಿ, ಮಕ್ಕಳ ಆಸ್ಪತ್ರೆಗೆ ಆರೋಗ್ಯ ಭಾಗ್ಯ ಕರುಣಿಸಿ- ನವಜಾತ ಶಿಶುಗಳಿಗೆ ಕಾದಿದೆ ಕಂಟಕ!

ನಂಜನಗೂಡು: ಗರ್ಭಿಣಿ- ಬಾಣಂತಿಯರಿಗಾಗಿ ನಿರ್ಮಿಸಲಾದ ತಾಯಿ- ಮಕ್ಕಳ ಆಸ್ಪತ್ರೆಗೆ ಆರೋಗ್ಯ ಭಾಗ್ಯ ಬೇಕಿದೆ. ನಂಜನಗೂಡು ನಗರದ ಹೃದಯಭಾಗದಲ್ಲಿರುವ ತಾಯಿ- ಮಕ್ಕಳ ಆಸ್ಪತ್ರೆಯ ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಹೆರಿಗೆಗಾಗಿ ಬರುವ ಮಹಿಳೆಯರು, ಸಂಬಂಧಿಕರಿಗೆ ರೋಗ ರುಜಿನಗಳ ಭೀತಿ ಕಾಡುತ್ತಿದೆ.

ಆಸ್ಪತ್ರೆ ಸುತ್ತ ಬೆಳೆದ ಕುರುಚಲು ಗಿಡಗಂಟಿಗಳು, ಕಸದ ರಾಶಿ, ಸೊಳ್ಳೆಗಳ ಕಾಟ, ಹಾವು- ಚೇಳುಗಳ ವಾಸಸ್ಥಾನವಾಗಿದೆ. ಚಿಕಿತ್ಸೆಗಾಗಿ ಬರುವ ಜನರಿಗೆ ಉಚಿತವಾಗಿ ರೋಗ ಅಂಟಿಸಿಕೊಳ್ಳುವ ಭೀತಿ ಎದುರಾಗಿದೆ. ಆಸ್ಪತ್ರೆ ಸುತ್ತಮುತ್ತಲಿನ ಸ್ಥಳಗಳ ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ನಂಜನಗೂಡು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನತೆಗೆ ವರವಾಗಬೇಕಿದ್ದ ಈ ಆಸ್ಪತ್ರೆ ಶಾಪವಾಗಿ ಕಾಡುತ್ತಿದೆ. ಇಲ್ಲಿನ ಅಶುಚಿತ್ವಕ್ಕೆ ಹೆದರಿ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಬಿಡುಗಡೆ ಆಗುತ್ತಿರುವ ಹಣ ಯಾರ ಜೇಬು ಸೇರುತ್ತಿದೆ ಗೊತ್ತಿಲ್ಲ. ಆದ್ರೆ, ಆಸ್ಪತ್ರೆಗಳ ಸ್ಥಿತಿಯಂತೂ ಶೋಚನೀಯವಾಗಿದೆ.

ಹೆರಿಗೆಗಾಗಿ ಬರುವ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗೆ ರೋಗ ಹರಡುವ ಆತಂಕ ಇಲ್ಲಿ ನಿರ್ಮಾಣವಾಗಿದೆ. ಕೂಡಲೇ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ, ತಾಯಿ-ಮಕ್ಕಳ ಆಸ್ಪತ್ರೆಯನ್ನು ಸ್ವಚ್ಛತೆ ಮಾಡಬೇಕಿದೆ. ನಿರ್ಲಕ್ಷ್ಯ ತೋರಿರುವ ಆರೋಗ್ಯ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗೆ ಸ್ಥಳೀಯ ಶಾಸಕರು ಸರ್ಜರಿ ಮಾಡ್ತಾರಾ? ಕಾದು ನೋಡಬೇಕಿದೆ.

-ಸಿ.ಎಂ. ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್ ನಂಜನಗೂಡು

Edited By : Ashok M
PublicNext

PublicNext

21/10/2024 07:58 pm

Cinque Terre

30.05 K

Cinque Terre

0

ಸಂಬಂಧಿತ ಸುದ್ದಿ