ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ವಿದ್ಯಾರ್ಥಿಗಳು ತಮ್ಮ ನೆಲದ ಇತಿಹಾಸ ತಿಳಿದುಕೊಳ್ಳಬೇಕು - ಹಿರಿಯ ಸಾಹಿತಿ ಮತ್ತಿಹಳ್ಳಿ

ಸಿದ್ದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಾಪುರ ಘಟಕದ ವತಿಯಿಂದ ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ದಸರಾ ಯುವ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸ್ವರಚಿತ ಕವನ ವಾಚಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಪೂರ್ಣಿಮಾ ನಾಯ್ಕ, ಮೇಘನಾ ನಾಯ್ಕ, ಜಾನಕಿ ಬಡಗಿ, ಶರತ್, ರಾಧಿಕಾ ನಾಯ್ಕ, ಅರ್ಚನಾ ಗೌಡ, ಪ್ರಿಯಾ ಹೊಸೂರ, ಅಕ್ಷತಾ ನಾಯ್ಕ, ತೃಪ್ತಿ ನಾಯ್ಕ, ದಿವ್ಯಾ ಗೌಡ, ವಿನೂತಾ ಗೌಡ, ಮೈತ್ರಿ ಹಾಗೂ ಶಿರಸಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದಿವ್ಯಶ್ರೀ ಗೌಡ ಸ್ವರಚಿತ ಕವನ ವಾಚಿಸಿದರು.

ಕವಿಗೋಷ್ಠಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ದಸರಾ ಯುವ ಕವಿಗೋಷ್ಠಿಗೆ ಚಾಲನೆ ನೀಡಿದ ಸಾಹಿತಿ ಹಾಗೂ ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ಕರ್ನಾಟಕದ ಬಾರ್ಡೊಲಿ ಎಂದು ಕರೆಸಿಕೊಳ್ಳುವ ಸಿದ್ದಾಪುರದಲ್ಲಿ ಅತಿ ಹೆಚ್ಚು ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಪದವಿ ಕಾಲೇಜಿನ ಈ ಪರಿಸರದಲ್ಲಿ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಬೇಡ್ಕಣಿಯ ಚೌಡಾ ನಾಯ್ಕರ ಬೆವರ ಹನಿ ಹಾಗೂ ದೀವರ ಇತಿಹಾಸವಿದೆ. ವಿದ್ಯಾರ್ಥಿಗಳು ತಮ್ಮ ನೆಲದ ಇತಿಹಾಸ ತಿಳಿದುಕೊಳ್ಳಬೇಕು. ನಿಮ್ಮ ಊರು, ಹಿರಿಯರು ಬಗ್ಗೆ ಮೊದಲು ಅರಿತುಕೊಳ್ಳಬೇಕು. ಶಿಕ್ಷಣ ಎನ್ನುವುದು ಬದುಕಿನ ಆರ್ಥಿಕ ಮಜಲಿಗೆ ವೇದಿಕೆಯೇ ಹೊರತು ಜ್ಞಾನಕ್ಕಲ್ಲ. ಅಡವಿಯೊಳಗಿರುವ ಪಕ್ಷಿ ಮತ್ತು ಪ್ರಾಣಿಗಳ ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಸತೀಶ ನಾಯ್ಕ ಮಾತನಾಡಿ, ಎಲ್ಲಿಯವರೆಗೆ ಸಂಸ್ಕಾರ ಹಾಗೂ ಶಿಸ್ತು ರೂಢಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಏನೇ ಸಾಧನೆ ಮಾಡಿದರೂ ಶೂನ್ಯ. ನೀವು ಧರಿಸುವ ಬಟ್ಟೆ, ಚಪ್ಪಲಿ, ಶೂಗಳ ಹಿಂದೆ ಪಾಲಕರ ಶ್ರಮ ಎಷ್ಟಿರುತ್ತದೆ ಎಂಬುದನ್ನು ತಿಳಿದುಕೊಂಡು ಮುನ್ನಡೆಯಿರಿ. ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸಿದಷ್ಟು ನಮ್ಮ ಗೌರವ ಹೆಚ್ಚುತ್ತದೆ ಎಂದರು.

Edited By : PublicNext Desk
Kshetra Samachara

Kshetra Samachara

16/10/2024 03:33 pm

Cinque Terre

4.2 K

Cinque Terre

0

ಸಂಬಂಧಿತ ಸುದ್ದಿ