ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರಾದೇಶಿಕ ಆಯುಕ್ತರ ಹುದ್ದೆ ಖಾಲಿ, ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ನೆನೆಗುದಿಗೆ..!

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅವಧಿ ಆ. 16ರಂದು ಪೂರ್ಣಗೊಂಡಿದೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆ ಖಾಲಿ ಇರುವ ಕಾರಣಕ್ಕೆ ಅವಧಿ ಮುಗಿದು ತಿಂಗಳಾದರೂ ಸ್ಥಾಯಿ ಸಮಿತಿಗಳ ನೂತನ ಸದಸ್ಯರ ಆಯ್ಕೆಗೆ ಮುಹೂರ್ತ ನಿಗದಿಯಾಗುತ್ತಿಲ್ಲ.

ಹೌದು.. ಪ್ರತಿ ವರ್ಷ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಂತೆ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರೇ ನಡೆಸಿಕೊಡುವುದು ವಾಡಿಕೆ. 2022-23ರ ಸಾಲಿನಲ್ಲಿ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಜುಲೈ 11 (2022) ರಂದು ನಡೆಸಲಾಗಿತ್ತು. ಕಳೆದ ಸಾಲಿನಲ್ಲಿ ಆಗಸ್ಟ್ 17ರಂದು ನಡೆದಿತ್ತು. ಆದರೆ ಈ ಬಾರಿ ಪ್ರಾದೇಶಿಕ ಆಯುಕ್ತರ ಹುದ್ದೆ ಖಾಲಿ ಇರುವುದರಿಂದ ಆಯ್ಕೆ ಪ್ರಕ್ರಿಯೆಗೆ ಅಡಚಣೆ ಉಂಟಾಗಿದೆ.

ಪ್ರತಿ ಸ್ಥಾಯಿ ಸಮಿತಿಗೆ ತಲಾ 7 ಜನ ಸದಸ್ಯರ ಆಯ್ಕೆ ನಡೆಯಬೇಕು. ಬಳಿಕ ಇದರಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇಲ್ಲಿಯವರೆಗೆ ಕಳೆದ ಎರಡು ಅವಧಿಯಲ್ಲಿ ಬಿಜೆಪಿಯಿಂದ 32 ಹಾಗೂ ಕಾಂಗ್ರೆಸ್‌ನಿಂದ 24 ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿಗೆ ಆಯ್ಕೆಯಾಗಿದ್ದಾರೆ. ಹಾಲಿ ಮೇಯ‌ರ್, ಉಪ ಮೇಯರ್, ಸಭಾನಾಯಕ ಹಾಗೂ ವಿಪಕ್ಷ ನಾಯಕ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ. ಹಾಗಾಗಿ, ಈ ಬಾರಿ ಹೊಸಬರಿಗೆ ಅವಕಾಶ ಸಿಗಲಿದೆ. 82 ಸದಸ್ಯ ಬಲದ ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಬೆಂಬಲಿತರೂ ಸೇರಿ ಬಿಜೆಪಿಗೆ 43 ಮತ್ತು ಬೆಂಬಲಿತರೂ ಸೇರಿ ಕಾಂಗ್ರೆಸ್‌ಗೆ 36 ಸದಸ್ಯರಿದ್ದಾರೆ.

ನೂತನ ಮೇಯ‌ರ್ ರಾಮಪ್ಪ ಬಡಿಗೇರ- ಉಪ ಮೇಯ‌ರ್ ದುರ್ಗಮ್ಮ ಬಿಜವಾಡ ಆಯ್ಕೆ- ಚುನಾವಣೆ ಜೂನ್ 29ರಂದು ನಡೆದಿತ್ತು. ನೂತನ ಮೇಯರ್-ಉಪ ಮೇಯ‌ರ್ ಆಯ್ಕೆಯಾಗುವ ಜೊತೆ ಜೊತೆಗೆ ಹಿಂದಿನ ಸ್ಥಾಯಿ ಸಮಿತಿಗಳ ಅವಧಿಯೂ ಕೊನೆಗೊಂಡಿತ್ತು.

Edited By : Suman K
Kshetra Samachara

Kshetra Samachara

18/09/2024 01:51 pm

Cinque Terre

12.02 K

Cinque Terre

0

ಸಂಬಂಧಿತ ಸುದ್ದಿ