ಕಾರವಾರ (ಉತ್ತರಕನ್ನಡ): ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಅಪರಿಚಿತ ವಾಹನಗಳು ಕಸ ಎಸೆದು ಹೋಗುತ್ತಿರುವುದಕ್ಕೆ ಪರಿಸರ ಸಂಘಟನೆಯೊಂದು ಆಕ್ರೋಶ ವ್ಯಕ್ತಪಡಿಸಿದೆ.
ಅಂಕೋಲಾ- ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅಲ್ಲಲ್ಲಿ ತ್ಯಾಜ್ಯದ ರಾಶಿಯೇ ಬಿದ್ದಿದ್ದು ವಾಹನ ಸವಾರರಿಗೆ ಅಸಹ್ಯ ಹುಟ್ಟಿಸುವಂತಿದೆ. ಅಂಕೋಲಾ ತಾಲ್ಲೂಕಿನ ಬಾಳೆಗುಳಿಯಿಂದ ಸುಂಕಸಾಳ ಮಾರ್ಗದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಕಸಗಳನ್ನು ಚೀಲಗಳಲ್ಲಿ ತುಂಬಿ ಎಸೆದು ಹೋಗಲಾಗಿದೆ. ಹೊರರಾಜ್ಯಗಳಿಂದ ಸಂಚರಿಸುವ ಸರಕು ಸಾಗಣೆ ವಾಹನಗಳಿಂದ ಕಸವನ್ನು ತಂದು ಇಲ್ಲಿಗೆ ಸುರಿಯುತ್ತಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಸ್ಥಳೀಯ ಪಂಚಾಯಿತಿಗಳಾಗಲೀ, ಅಧಿಕಾರಿಗಳಾಗಲೀ ಯಾರೂ ಸಹ ತಲೆಕೆಡಿಸಿಕೊಂಡಿಲ್ಲ.
ಹೆದ್ದಾರಿಯು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡೇ ಇದ್ದು, ಹೆದ್ದಾರಿಯಂಚಿಗೆ ಎಸೆಯುತ್ತಿರುವ ಕಸ ಕಾಡನ್ನು ಸೇರುವ ಸಾಧ್ಯತೆಗಳಿವೆ. ಅಲ್ಲದೇ ಈ ಕಸವನ್ನು ಜಾನುವಾರುಗಳು ಹಾಗೂ ಕಾಡು ಪ್ರಾಣಿಗಳು ತಿನ್ನುವ ಆತಂಕ ಸಹ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕಸವನ್ನು ಎಸೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜೊತೆಗೆ ಹೀಗೆ ಕಸ ಎಸೆದು ಹೋದವರನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಟ್ವಿಟರ್‌ನಲ್ಲಿ ವೆಸ್ಟರ್ನ್ ಘಾಟ್ಸ್ ಎಂಬ ಪರಿಸರ ಸಂಘಟನೆಯು ಫೋಟೋ ಸಹಿತ ಹಂಚಿಕೊಂಡು ಮನವಿ ಮಾಡಿದ್ದಾರೆ.
PublicNext
25/09/2022 09:42 pm