ಕಾರವಾರ: ಏಷ್ಯಾದ ಅತಿದೊಡ್ಡ ನೌಕಾನೆಲೆಯಾದ ಕಾರವಾರದ ಅರಗಾದಲ್ಲಿರುವ, ಕದಂಬ ನೌಕಾನೆಲೆಗೆ ಹೊಂಡಿಕೊಂಡಂತಿರುವ ಕೆಲ ಕಡಲತೀರಗಳಲ್ಲಿ ಮೀನುಗಾರಿಕೆ ನಡೆಸುವ ವಿಚಾರ ಮತ್ತೆ ನೌಕಾನೆಲೆ ಸಿಬ್ಬಂದಿ ಹಾಗೂ ಮೀನುಗಾರರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನೌಕಾನೆಲೆಗೆ ನಾಲ್ವರು ಅಕ್ರಮವಾಗಿ ಪ್ರವೇಶ ಮಾಡಿದ್ದಾಗಿ ನೌಕಾನೆಲೆಯ ಅಧಿಕಾರಿಗಳು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಇದೀಗ ಮೀನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ನೌಕಾನೆಲೆ ವ್ಯಾಪ್ತಿಯ ತೀರಗಳಲ್ಲಿ ಮೀನುಗಾರಿಕೆಗಾಗಿ ಮೀನುಗಾರರೇ ತೆರಳುತ್ತಾರೆ ಎನ್ನುವುದು ತಿಳಿದಿದ್ದರೂ ತೊಂದರೆ ನೀಡುವ ಉದ್ದೇಶದಿಂದಲೇ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಮೀನುಗಾರ ಮುಖಂಡರು ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರನ್ನ ಕೇಳಿದ್ರೆ ಅವರು ಕೂಡ ಇದನ್ನೇ ಹೇಳ್ತಾರೆ. ನೌಕಾನೆಲೆ ವ್ಯಾಪ್ತಿಯ ಪ್ರದೇಶದಲ್ಲಿ ಮೇಲ್ನೋಟಕ್ಕೆ ಮೀನುಗಾರಿಕೆ ನಡೆಸುವ ನಿಟ್ಟಿನಲ್ಲಿ ಸ್ಥಳೀಯ ಮೀನುಗಾರರೇ ಓಡಾಟ ನಡೆಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎನ್ನುವ ಅವರು, ನೌಕಾನೆಲೆಯ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಮೀನುಗಾರರಿದ್ದರೆ ನಿರ್ಬಂಧಿತ ಪ್ರದೇಶದಲ್ಲಿ ಓಡಾಟ ನಡೆಸುವುದನ್ನು ಆದಷ್ಟು ಕಡಿಮೆ ಮಾಡಬೇಕು ಎನ್ನುತ್ತಿದ್ದಾರೆ.
ಸದ್ಯ ಅಪರಿಚಿತರು ಯಾರೆಂಬ ಶೋಧ ಕಾರ್ಯ ಮುಂದುವರಿದಿದ್ದರೂ ಸಹ, ಬಹುತೇಕ ಮೀನುಗಾರರೇ ಎನ್ನುವುದು ಸ್ಥಳೀಯರ ವಾದವಾಗಿದೆ. ಹಾಗೇನಾದರೂ ಆಗಂತುಕರಾಗಿದ್ದಲ್ಲಿ ಕ್ರಮ ಕೈಗೊಳ್ಳಲಿ. ಆದರೆ ಆ ನೆಪದಲ್ಲಿ ಮೀನುಗಾರರನ್ನ ಹೆಣೆಯುವ ಪ್ರಯತ್ನ ನಿಲ್ಲಿಸಬೇಕೆಂಬ ಆಗ್ರಹ ಮೀನುಗಾರರದ್ದಾಗಿದೆ.
PublicNext
14/09/2022 06:52 pm