ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಅಸಿಸ್ಟಂಟ್ ಮ್ಯಾನೇಜರೇ ಬ್ಯಾಂಕ್ ಖಾತೆಗೆ ಕನ್ನ ಹಾಕಿ 2.69 ಕೋಟಿ ಎಗರಿಸಿದ್ದು, ಇದರಿಂದ ಬ್ಯಾಂಕುಗಳಲ್ಲಿ ಹಣವಿಡಲು ಜನ ಆತಂಕ ಪಡುವಂತೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎನ್ನುವಾತ ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದ. ಸೇರ್ಪಡೆ ಆದಾಗಿಂದ ಸೆ.5ರವರೆಗೆ ಬ್ಯಾಂಕ್‌ನ ಸಿಬ್ಬಂದಿಗಳ ಲಾಗಿನ್ ಮೂಲಕ ಕರೆಂಟ್ ಅಕೌಂಟ್‌ನಿಂದ ತನ್ನ ಪತ್ನಿ ರೇವತಿ ಗೊರೆ ಹೆಸರಿನ ಖಾತೆಗೆ 2.69 ಕೋಟಿ ಹಣವನ್ನ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದು,ಪರಾರಿಯಾಗಿದ್ದಾನೆ.
ಸದ್ಯ ಬ್ಯಾಂಕ್ ಮ್ಯಾನೇಜರ್ ಅಸಿಸ್ಟೆಂಟ್ ಮ್ಯಾನೇಜರ್‌ನ ಪತ್ತೆ ಮಾಡಿ, ಹಣವನ್ನು ಆತನಿಂದ ಮರುಪಾವತಿ ಮಾಡಿಕೊಡಿಸುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ ಈ ಪ್ರಕರಣ ಖಾತೆದಾರರಲ್ಲಿ ಆತಂಕದ ಛಾಯೆ ಮೂಡಿಸಿದೆ. ಕೋಟಿಗಟ್ಟಲೆ ಹಣವನ್ನ ಲಪಟಾಯಿಸಿ ಪರಾರಿಯಾಗಿರುವುದು ಜನರಲ್ಲೀಗ ಬ್ಯಾಂಕುಗಳ ಮೇಲೆ ಭರವಸೆ ಇಡುವುದಾದರೂ ಹೇಗೆಂಬ ಪ್ರಶ್ನೆ ಉದ್ಭವಿಸಿದೆ.
ಸದ್ಯ ತನ್ನ ಪತ್ನಿಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವರ್ಗಾಯಿಸಿಕೊಂಡಿರುವ ಕುಮಾರ್ ಬೋನಾಲ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಆತನ ಪತ್ನಿಯ ಖಾತೆಯನ್ನ ಪರಿಶೀಲಿಸಿದಾಗ ಆ ಖಾತೆಯಿಂದ ಹಣವೆಲ್ಲ ಖಾಲಿಯಾಗಿದೆ. ಹೀಗಾಗಿ ಆರೋಪಿಯನ್ನ ಬಂಧಿಸಿದರೂ ಹಣ ಮರಳಿ ಸಿಗತ್ತಾ ಎನ್ನುವ ಅನುಮಾನ ಒಂದ್ಕಡೆಯಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್, ಜನತೆ ಈ ಬಗ್ಗೆ ಹೆದರುವುದು ಬೇಡ. ಕುಮಾರ್ ಲಪಟಾಯಿಸಿರುವುದು ಬ್ಯಾಂಕ್‌ನ ಕರೆಂಟ್ ಅಕೌಂಟ್ ಹಣ ಹೊರತು ಸಾರ್ವಜನಿಕರದ್ದಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ, ಪದೇ ಪದೇ ಇಂಥ ಪ್ರಕರಣಗಳು ಮರುಕಳಿಸುತ್ತಿರುವುದು ಮಾತ್ರ ಬ್ಯಾಂಕುಗಳ ಮೇಲಿನ ವಿಶ್ವಾಸ ಕಡಿಮೆ ಮಾಡುವಂತಾಗಿದೆ. ಬ್ಯಾಂಕ್ ಒಳಗಿನ ಅಧಿಕಾರಿ, ಸಿಬ್ಬಂದಿಗಳೇ ಹಣ ಲಪಟಾಯಿಸುವ ಗೀಳಿಗೆ ಬಿದ್ದಿರುವುದು ನಿಜಕ್ಕೂ ಖಾತೆದಾರರು ಬ್ಯಾಂಕ್‌ಗಳತ್ತ ಒಮ್ಮೆ ಯೋಚಿಸಿ ಹೆಜ್ಜೆ ಇಡುವಂತೆ ಮಾಡಿರುವುದಂತೂ ಸತ್ಯ.
PublicNext
12/09/2022 08:36 pm