ಕಾರವಾರ: 52ರ ವಯಸ್ಸಿನ ವ್ಯಕ್ತಿಯೋರ್ವ 16 ವಯಸ್ಸಿನ ಅಪ್ರಾಪ್ತ ಬಾಲಕಿಯನ್ನ ವಿವಾಹವಾಗಿದ್ದು, ಮದುವೆ ಆದ ಮೂರು ತಿಂಗಳ ಬಳಿಕ ವಧು ಅಪ್ರಾಪ್ತೆ ಎಂಬುದು ಜಗಜ್ಜಾಹೀರಾಗಿದೆ. ಇದೀಗ ಇಬ್ಬರ ಕುಟುಂಬದಲ್ಲೂ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ!!
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಜುಲೈ 19ರಂದು ಕಾರವಾರದ ದೇವಾಲಯೊಂದರಲ್ಲಿ ಅದ್ಧೂರಿಯಾಗಿ ವಿವಾಹವೊಂದು ನಡೆದಿತ್ತು. ವಧು ದೈಹಿಕವಾಗಿ ದಷ್ಠಪುಷ್ಠವಾಗಿದ್ದಳು. ಹೀಗಾಗಿ 52 ವಯಸ್ಸಿನ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ವಧುವನ್ನ ವಿವಾಹ ಮಾಡಿಕೊಡಲಾಗಿತ್ತು. ಅದ್ಧೂರಿಯಾಗಿಯೇ ನಡೆದಿದ್ದ ವಿವಾಹದಲ್ಲಿ ಸುಮಾರು 60 ಮಂದಿ ಭಾಗವಹಿಸಿದ್ದರು.
ಮದುವೆಯಾಗಿ ಮೂರು ತಿಂಗಳ ಬಳಿಕ ಅಂಗನವಾಡಿ ಕಾರ್ಯಕರ್ತೆಯರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗಗೊಂಡಿದ್ದು, ಕೂಡಲೇ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿ, 52ರ ವ್ಯಕ್ತಿಯನ್ನ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಬಂಧನದ ಭೀತಿಯಿಂದ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಪ್ರಾಪ್ತೆಯನ್ನ ಮದುವೆ ಮಾಡಲಾಗಿದ್ದು, ಫೋಕ್ಸೋ ಪ್ರಕರಣ ದಾಖಲಾಗಿದೆ ಎಂಬ ಬಗ್ಗೆ ಎರಡೂ ಕುಟುಂಬದವರಿಗೆ ಪೊಲೀಸರು ಹಾಗೂ ಇತರ ಅಧಿಕಾರಿಗಳು ವಿವರಿಸಿದ ಬಳಿಕ ಎರಡೂ ಕುಟುಂಬ ಕಕ್ಕಾಬಿಕ್ಕಿಯಾಗಿದೆ. ಅಲ್ಲದೇ ಮದುವೆಗೆ ಹೋಗಿದ್ದ ಸಂಬಂಧಿಕರು ಸೇರಿ ಒಟ್ಟೂ 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದ್ದು, ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವಿವಾಹಿತ ವ್ಯಕ್ತಿಯನ್ನ ಪೊಲೀಸರು ಬಂಧಿಸಿ ಕಾರವಾರ ಜೈಲಿನಲ್ಲಿರಿಸಿದ್ದರೆ, ಅಪ್ರಾಪ್ತೆ ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತೆಯಾಗಿದ್ದಾಳೆ.
Kshetra Samachara
10/09/2022 03:56 pm