ಕಾರವಾರ: ವ್ಯಕ್ತಿಯೊಬ್ಬ ಮದ್ಯದ ಮತ್ತಿನಲ್ಲಿ ಪತ್ನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾನೂ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಿದ್ದಾಪುರ ತಾಲೂಕಿನ ಕಾನಗೋಡನಲ್ಲಿ ಶುಕ್ರವಾರ ನಡೆದಿದೆ.
ಕಾನಗೋಡ ಗ್ರಾಮದ ಗಣೇಶನಗರದ ಗುತ್ಯಾ ಚೆನ್ನಯ್ಯ ಸಹೋದರರೊಂದಿಗೆ ಆಸ್ತಿಯ ಹಂಚಿಕೆಗೆ ಸಂಬಂಧಿಸಿದಂತೆ ತಕರಾರು ನಡೆಯುತ್ತಿದ್ದರಿಂದ ಪ್ರತಿದಿನ ಸಾರಾಯಿ ಕುಡಿದು, ತನ್ನ ಪತ್ನಿಯಾದ ರೇಣುಕಾ ಚೆನ್ನಯ್ಯಳೊಂದಿಗೆ ಜಗಳ ಮಾಡುತ್ತಾ ದೈಹಿಕ ಹಿಂಸೆಯನ್ನು ನೀಡುತ್ತಿದ್ದನು. ಈ ವಿಚಾರವಾಗಿ ಈ ಹಿಂದೆ ಪತ್ನಿಯು ಈತನ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಮತ್ತಷ್ಟು ಸಿಟ್ಟಾಗಿ ಸಾರಾಯಿ ಕುಡಿದು ಬಂದು ಹೊಡೆಯುತ್ತಿದ್ದನು.
ಸಂಜೆ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿ ಹೊಡೆದು, ತದನಂತರ ಮನೆಯಲ್ಲಿ ಬೈಕ್‌ಗೆ ಹಾಕಲು ತಂದಿದ್ದ ಪೆಟ್ರೋಲ್ ಅನ್ನು ಪತ್ನಿಯ ಮೇಲೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ಎದೆ, ಮುಖ ಹಾಗೂ ಕೈನ ಬಹುತೇಕ ಭಾಗಗಳಿಗೆ ಬೆಂಕಿಯಿಂದ ಸುಟ್ಟಿದೆ. ತಕ್ಷಣ 108 ಅಂಬ್ಯುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಗುತ್ಯಾ ಚೆನ್ನಯ್ಯ ಕಳೆನಾಶಕ ಸೇವಿಸಿದ್ದ ಪರಿಣಾಮ ತಾಲೂಕು ಆಸ್ಪತ್ರೆಯಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/09/2022 11:39 pm