ಕಾರವಾರ (ಉತ್ತರಕನ್ನಡ): ಮೀನುಗಾರರಿಗೆ ದಸರಾ ಬಂಪರ್ ಶುರುವಾಗಿದೆ. ಸಾಂಪ್ರದಾಯಿಕ ಏಂಡಿ ಬಲೆಗೆ ಸದ್ಯ ಭರಪೂರ ಮೀನು ಬೀಳಲಾರಂಭಿಸಿದ್ದು, ಕಾರವಾರದ ಟ್ಯಾಗೋರ್ ಬೀಚ್ ತುಂಬೆಲ್ಲ ಮೀನುಗಾರರು ಮೀನುಗಳನ್ನು ಹರಡಿಕೊಂಡಿರುವುದು ಕಳೆದೆರಡು ದಿನಗಳಿಂದ ಮಾಮೂಲಿ ಎಂಬಂತಾಗಿದೆ.
ದಸರಾ, ದೀಪಾವಳಿ ಹಬ್ಬ ಬಂತೆಂದರೆ ಕಂಪನಿಗಳೆಲ್ಲ ಬಂಪರ್ ಆಫರ್ ಕೊಡುವಂತೆ, ಪ್ರತಿ ವರ್ಷ ಕೂಡ ಈ ಅವಧಿಗೆ ಮೀನುಗಾರರಿಗೂ ಕಡಲು ಬಂಪರ್ ದಿನಗಳನ್ನೇ ನೀಡುತ್ತಿರುತ್ತದೆ. ಈ ಬಾರಿಯೂ ಕೂಡ ದಸರಾ ಕೊಡುಗೆ ಎಂಬಂತೆ ಕಾರವಾರ ಟ್ಯಾಗೋರ್ ಬೀಚ್‌ನಲ್ಲಿ ಹಾಕಿದ್ದ ಏಂಡಿ ಬಲೆಗೆ ಭರಪೂರ ಮೀನುಗಳು ಬಿದ್ದಿವೆ.
ಬೆಳ್ಳಂಬೆಳಿಗ್ಗೆ ಕಡಲತೀರದಲ್ಲಿ ಏಂಡಿ ಬಲೆ ಹಾಕಿದ್ದ ಮೀನುಗಾರರಿಗೆ ಲೆಪ್ಪೆ ಮೀನು ಭರಪೂರವಾಗಿ ದೊರೆತಿದ್ದು, ಅಲ್ಪ ಪ್ರಮಾಣದಲ್ಲಿ ಸೀಗಡಿ ಕೂಡ ಬಿದ್ದಿದೆ. ಫ್ರೆಶ್ ಆಗಿ ಸಿಗುವ ಮೀನುಗಳನ್ನ ಬಲೆಗಳಿಂದ ಬಿಡಿಸುತ್ತಾ ಮೀನುಗಾರರು ಕಡಲತೀರದಲ್ಲಿ ಹರಡಿಕೊಂಡು ಕೂರುವ ದೃಶ್ಯ ಕಳೆದೆರಡು ದಿನಗಳಿಂದ ಕಾಣಸಿಗುತ್ತಿದ್ದು, ಸ್ಥಳೀಯರು ಕೂಡ ತಾಜಾ ಮೀನುಗಳನ್ನ ಖರೀದಿಸಲು ಬೆಳ್ಬೆಳಿಗ್ಗೆ ಕಡಲತೀರದತ್ತ ಧಾವಿಸುತ್ತಿದ್ದಾರೆ.
PublicNext
02/10/2022 12:55 pm