ಕಾರವಾರ: ಹಲವಾರು ವರ್ಷಗಳಿಂದ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ ವೇಳೆ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಶಿರಾಲಿ ನಿಲಕಂಠದ ಹುಲ್ಲುಕ್ಕಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಭಟ್ಕಳ ಕಾರ್ಗದ್ದೆ ನಿವಾಸಿ ಜುಬೇರ್ ಇರ್ಶಾದ್ ಅಲಿಅಕ್ಬರ್ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅನೇಕ ವರ್ಷದಿಂದ ಶಿಲೆ ಕಲ್ಲು ಕ್ವಾರಿ ನಡೆಸಿ ಸದ್ಯ ಖಾಲಿ ಇರುವ ಈ ಸ್ಥಳದಲ್ಲಿ ಮಳೆ ನೀರು ತುಂಬಿ ಕೆರೆಯಂತಾಗಿದೆ. ಶುಕ್ರವಾರದ ರಜೆ ದಿನವನ್ನು ಕಳೆಯಲು ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಯುವಕ ನೀರಿನಲ್ಲಿ ಮುಳುಗಿರುವ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಮೃತದೇಹ ಪತ್ತೆ ಹಚ್ಚಲು ಸಹಕರಿಸಿದರು. ಅಂತಿಮವಾಗಿ ಸಾವನ್ನಪ್ಪಿದ ಯುವಕನ ಮೃತದೇಹ ಪತ್ತೆ ಹಚ್ಚುವಲ್ಲಿ ಸ್ಥಳೀಯ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಸುಮಂತ.ಬಿ, ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್ ನಾಯಕ, ಭಟ್ಕಳ ಅಗ್ನಿಶಾಮಕ ದಳ, ಎಸ್.ಡಿ.ಆರ್.ಆಫ್ ತಂಡ, ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಮುಂತಾದವರು ಇದ್ದರು.
PublicNext
09/09/2022 02:42 pm