ಉಡುಪಿ: ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಉಡುಪಿ ನಗರದ ಮನೆ, ಶಾಲೆಗಳು ಜಲಾವೃತಗೊಂಡಿವೆ.
ಕಳೆದ 24 ಗಂಟೆಗಳಿಂದ ನಿರಂತರ ಸುರಿದ ಮಹಾಮಳೆ ನಗರ ಪ್ರದೇಶದ ಜನರ ನಿದ್ದೆಗೆಡಿಸಿದೆ. ಮುಖ್ಯವಾಗಿ ಕೃಷ್ಣನಗರಿಯ ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನತೆ ಇಡೀ ರಾತ್ರಿ ಮಳೆ ಜಾಗರಣೆ ನಡೆಸುವಂತಾಯಿತು. ಭಾರೀ ಗಾಳಿ ಮಳೆಗೆ ಕರಾವಳಿ ಬೈಪಾಸ್‌ನಲ್ಲಿ ಮರವೊಂದು ಧರೆಗೆ ಉರುಳಿದೆ. ಪರಿಣಾಮವಾಗಿ ಕರಾವಳಿ ಬೈಪಾಸ್‌ನಿಂದ ಮಲ್ಪೆಗೆ ಹೋಗುವ ರಸ್ತೆ ಸಂಚಾರ ಕಡಿತಗೊಂಡಿದೆ. ಕೃಷ್ಣ ಮಠದ ಪಾರ್ಕಿಂಗ್ ಪರಿಸರದ ಆಸುಪಾಸಿನಲ್ಲಿ ಮತ್ತು ಬೈಲಕೆರೆಯಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಈ ಭಾಗದ ಜನರನ್ನು ರಾತ್ರಿಯೇ ತೆಪ್ಪದ ಸಹಾಯದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.
ಉಡುಪಿ ನಗರದ ಪ್ರಮುಖ ಬೀದಿಗಳು ಜಲಾವೃತಗೊಂಡಿದ್ದು, ಉಡುಪಿ-ಮಣಿಪಾಲ ಸಂಪರ್ಕ ರಸ್ತೆ ಇದೇ ಮೊದಲ ಬಾರಿಗೆ ಕಡಿತಗೊಂಡಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಇಂದೂ ಕೂಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಖ್ಯವಾಗಿ ಉಡುಪಿ-ಮಣಿಪಾಲ ಸಂಪರ್ಕ ರಸ್ತೆಯೇ ಕಡಿತಗೊಂಡಿದ್ದು, ಹೆದ್ದಾರಿಯಲ್ಲಿ ನೀರು ನಿಂತಿದೆ. ರಸ್ತೆಯಲ್ಲಿ ಮಳೆನೀರು ತುಂಬಿ ಹರಿಯುತ್ತಿರುವ ಕಾರಣ ಕೃಷ್ಣಮಠ ಪರಿಸರದ ಕಲ್ಸಂಕ ಬೈಲಕೆರೆ ಪ್ರದೇಶ ನೆರೆಯಿಂದ ಆವೃತವಾಗಿದೆ. ಇದೇ ಮೊದಲ ಬಾರಿಗೆ ಸತತ ಮಳೆಯಿಂದ ಬನ್ನಂಜೆ , ಕೊಡವೂರು, ಪಾಡಿಗಾರು, ಗುಂಡಿಬೈಲು ಪ್ರದೇಶ ಜಲಾವೃತಗೊಂಡಿವೆ.
Kshetra Samachara
20/09/2020 09:59 am