ಉಡುಪಿ: ಮುರ್ಡೇಶ್ವರ ಸಮುದ್ರದಲ್ಲಿ ಪ್ರವಾಸಕ್ಕೆ ಬಂದಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿಯೂ ಸಾಕಷ್ಟು ಮುಂಜಾಗರೂಕತೆ ವಹಿಸಲಾಗಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಸೀಸನ್ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ಜೀವ ರಕ್ಷಕರನ್ನು ನೇಮಿಸಲಾಗಿದೆ.
ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಾದ ಬೀಚ್‌ಗಳಿಗೆ ಹೊರ ಜಿಲ್ಲೆಯ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಬರುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಮಕ್ಕಳು ಬೀಚ್‌ಗಳಲ್ಲಿ ಆಳ ಸಮುದ್ರಕ್ಕೆ ಇಳಿದು ಅನಾಹುತ ಸಂಭವಿಸದಂತೆ ಕ್ರಮ ವಹಿಸಲಾಗಿದೆ.ಇತ್ತೀಚೆಗೆ ಮುರ್ಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ, ಮುಳುಗು ತಜ್ಞ ಈಶ್ವರ ಮಲ್ಪೆ
ಬೀಚ್‌ಗೆ ತೆರಳಿ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.ಶಾಲಾ ಪ್ರವಾಸಕ್ಕೆ ಬೀಚ್‌ಗೆ ಮಕ್ಕಳನ್ನು ಕರೆದುಕೊಂಡು ಬಂದ ಶಿಕ್ಷಕರಿಗೆ ಸಮುದ್ರದ ಅಪಾಯದ ಬಗ್ಗೆ ಹಾಗೂ ಮೊಣಕಾಲಿನಷ್ಟು ನೀರು ಇರುವಲ್ಲಿ ಮಾತ್ರ ಆಡುವಂತೆ ಮಾರ್ಗದರ್ಶನ ನೀಡಿದರು. ಅದೇ ರೀತಿ ಮಕ್ಕಳಿಗೂ ಅವರು ಸಮುದ್ರಕ್ಕೆ ಇಳಿಯುವಾಗ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಿದರು.
PublicNext
13/12/2024 01:37 pm