ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಪವಾಡ ಸದೃಶ ಪಾರಾಗಿದ್ದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಅಪಘಾತದ ಭೀಕರ ದೃಶ್ಯ ಸೆರೆಯಾಗಿದೆ.
ಗಾಯಾಳು ಸ್ಕೂಟರ್ ಸವಾರನನ್ನು ಉತ್ತರ ಕರ್ನಾಟಕ ಮೂಲದ ಮುಲ್ಕಿ ಕೊಳಚಿ ಕಂಬಳದಲ್ಲಿ ವಾಸ್ತವ್ಯವಿರುವ ಶಿವಾನಂದ ಎಂದು ಗುರುತಿಸಲಾಗಿದೆ. ಶಿವಾನಂದ ಮುಲ್ಕಿ ಮೀನು ಮಾರುಕಟ್ಟೆ ಒಳಬದಿಯಿಂದ ಹೆದ್ದಾರಿ ಕ್ರಾಸ್ ಮಾಡಿ ಕೆನರಾ ಬ್ಯಾಂಕ್ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದು ಸರ್ವಿಸ್ ರಸ್ತೆಯಲ್ಲಿ ಉಡುಪಿ ಕಡೆಯಿಂದ ಅತಿ ವೇಗದಲ್ಲಿ ಬಂದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಸಂದರ್ಭ ಭೀಕರ ಶಬ್ದ ಉಂಟಾಗಿದ್ದು ಸ್ಕೂಟರ್ ಅನ್ನು ಸವಾರ ಸಮೇತ ಮಾರುದ್ದಕ್ಕೆ ಕಾರ್ ಎಳೆದುಕೊಂಡು ಹೋಗಿದೆ. ಅಪಘಾತದಲ್ಲಿ ಸ್ಕೂಟರ್ ಸವಾರ ಶಿವಾನಂದ ಅವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಪವಾಡ ಸದೃಶ ಪಾರಾಗಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಆಗಮಿಸಿದ ಕೂಡಲೇ ಸ್ಕೂಟರ್ ಸವಾರ ಸಮೇತ ಸ್ಥಳದಿಂದ ಪರಾರಿಯಾಗುವ ದೃಶ್ಯ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
13/12/2024 03:47 pm