ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಕಿನ್ನಿಗೋಳಿ ಮೀನು ಮಾರುಕಟ್ಟೆ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ವಿಶೇಷ ಸಭೆ ನಡೆದು ಅವ್ಯವಸ್ಥೆಗಳ ಬಗ್ಗೆ ನಾಗರಿಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಿನ್ನಿಗೋಳಿ ಮಹಿಳಾ ಮೀನು ಮಾರುಕಟ್ಟೆಯಲ್ಲಿ ರೊಟೇಷನ್ ಪದ್ದತಿ ಇಲ್ಲ. ಕೆಲವು ಮಾರಾಟಗಾರರಿಗೆ ಮಾತ್ರ ವ್ಯಾಪಾರ ಇದ್ದು ಕೆಲವರಿಗೆ ಇಲ್ಲ. ಅದಕ್ಕಾಗಿ ರೊಟೇಷನ್ ಪದ್ಧತಿ ಬೇಕು ಎಂದು ಮಹಿಳಾ ಮೀನುಗಾರರು ಸಭೆಯಲ್ಲಿ ಹೇಳಿದರು. ಇದಕ್ಕೆ ಉತ್ತರಿಸಿದ ಪುರುಷ ಮೀನುಗಾರರು ರೊಟೇಷನ್ ಪದ್ಧತಿಯಿಂದ ನಮಗೆ ತೊಂದರೆಯಾಗುತ್ತೆ. ಮಹಿಳೆಯರ ಮಧ್ಯೆ ನಮ್ಮನ್ನು ಹಾಕಿದರೆ ವಿನಾ ಕಾರಣ ಸಮಸ್ಯೆ ಆಗುತ್ತದೆ. ಸುಳ್ಳು ಆರೋಪಗಳು ನಮ್ಮ ಮೇಲೆ ಬರುತ್ತದೆ ಎಂದರು.
ಪ್ರತಿ ದಿನ ಸಂಜೆ ಕಿನ್ನಿಗೋಳಿ ಬಸ್ಸು ನಿಲ್ದಾಣ ಮತ್ತು ರಸ್ತೆ ಬದಿ ಮೀನು ಮಾರುತ್ತಿದ್ದು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ನಿಲ್ಲಿಸಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಶಾಸಕ ಉಮಾನಾಥ ಕೋಟ್ಯಾನ್ ಯಾವುದೇ ಸಮಸ್ಯೆ ಆಗದಂತೆ ಮಾರುಕಟ್ಟೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗುವುದು. ರಸ್ತೆ ಬದಿ ಅಥವಾ ಬಸ್ಸು ನಿಲ್ದಾಣದಲ್ಲಿ ಯಾವುದೇ ಕಾರಣಕ್ಕೂ ಮೀನು ಮಾರಾಟ ಮಾಡಬಾರದು. 15 ನೇ ತಾರೀಖಿನ ನಂತರ ರೊಟೇಷನ್ ಪದ್ಧತಿ ಮಾಡಲಾಗುವುದು ಎಂದರು. ಟ್ರಾಫಿಕ್ ಪೋಲಿಸರು ವಾಹನವನ್ನು ನಿಯಂತ್ರಿಸಲು ಕೇವಲ ಕಿನ್ನಿಗೋಳಿ ಭಾಗದಲ್ಲಿ ಮಾತ್ರ ನಿಲ್ಲುತ್ತಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ಆರೋಪಿಸಿದರು.
ಕಿನ್ನಿಗೋಳಿ ಸರ್ಕಲ್ ಬಳಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ, ಪಾರ್ಕಿಂಗ್ ಅವ್ಯವಸ್ಥೆ, ದಾನಿಗಳ ನೆರವಿನಿಂದ ಕೊಟ್ಟ ಬ್ಯಾರಿಕೇಡ್ ನಾಪತ್ತೆ, ಬಸ್ ನಿಲ್ದಾಣದಿಂದ ಹೊರಟ ಬಸ್ಸುಗಳು ಅಲ್ಲಲ್ಲಿ ನಿಲ್ಲಿಸಿ ತೊಂದರೆ, ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ಮುಖ್ಯಾಧಿಕಾರಿ ಸಾಯಿಷ್ ಚೌಟ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಗೋಪಾಲ್, ಟ್ರಾಫಿಕ್ ಅಧಿಕಾರಿ ನರೇಂದ್ರ, ಉಮೇಶ್, ಮುಲ್ಕಿ ಪೊಲೀಸ್ ಅಧಿಕಾರಿ ಕೃಷ್ಣಪ್ಪ, ಮೆಸ್ಕಾಂ ಇಲಾಖೆಯ ದಾಮೋದರ್, ಪಟ್ಟಣ ಪಂಚಾಯತ್ ಇಂಜಿನಿಯರ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
PublicNext
10/10/2022 04:09 pm